ಬೆಂಗಳೂರು, ನ 24(Daijiworld News/MB) : ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಅವರು ಭೇಟಿ ನೀಡಿ ಚರ್ಚೆ ಮಾಡಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಅವರು ಮುಖ್ಯಂತ್ರಿಯನ್ನು ಭೇಟಿಯಾಗುವ ಮುನ್ನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ "ಉಪಹಾರಕ್ಕೆಂದು ಹೋಟೆಲ್ಗೆ ಬಂದಿದ್ದೇನೆ" ಎಂದು ಹೇಳಿದ್ದು ಬಳಿಕ ಅರ್ಧ ಗಂಟೆಗೂ ಹೆಚ್ಚಿನ ಕಾಲ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ.
ಭೇಟಿಯ ನಂತರ "ಚಿಕ್ಕೋಡಿ ಕ್ಷೇತ್ರದಲ್ಲಿ ನೆರೆಯಲ್ಲಿ ಮನೆ ಹಾನಿಯಾದವರಿಗೆ ಪರಿಹಾರ ನೀಡಲು ಮಾಡಿದ್ದ ಪಟ್ಟಿಯಲ್ಲಿ ಹಲವು ಜನರ ಹೆಸರುಗಳು ಇಲ್ಲ. ಆ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ದೊರೆತಿಲ್ಲ. ನಾನು ಈ ಕುರಿತು ಮನವಿ ಕೊಡಲು ಹೋಗಿದ್ದೆ. ಹೊರತು ರಾಜಕೀಯ ಚರ್ಚೆ ಮಾಡಿಲ್ಲ" ಎಂದು ತಮ್ಮ ಸ್ಪಷ್ಟೀಕರಣ ನೀಡಿದ್ದಾರೆ.
ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಪಕ್ಷ ಟಿಕೆಟ್ ನೀಡದ ಹಿನ್ನಲೆಯಲ್ಲಿ ಪ್ರಕಾಶ್ ಹುಕ್ಕೇರಿ ಉಪಚುನಾವಣೆಯ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಈ ಚುನಾವಣೆ ಸಂದರ್ಭದಲ್ಲೇ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.