ಭೋಪಾಲ್, ನ 24(Daijiworld News/MB) : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ಜೋಶಿ (90) ಇಂದು ಮೃತಪಟ್ಟಿದ್ದಾರೆ. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದಾಗಿ ಭೋಪಾಲ್ನ ಖಾಸಗಿ ಆಸ್ಪತ್ರೆಯಲ್ಲಿ ಇದ್ದು ಅಲ್ಲೇ ತನ್ನ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಅವರ ಪುತ್ರ, ಮಾಜಿ ರಾಜ್ಯ ಸಚಿವ ದೀಪಕ್ ಜೋಶಿ ಪಿಟಿಐಗೆ ತಿಳಿಸಿದ್ದಾರೆ.
ಜುಲೈ 14, 1929 ರಂದು ಜನಿಸಿದ ಜೋಶಿ ಅವರನ್ನು 'ರಾಜಕೀಯದ ಸಂತ' ಎಂದು ಕರೆಯಲಾಗುತ್ತಿತ್ತು. ಅವರು ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ 1977 ರಿಂದ 1978 ರವರೆಗೆ ಸೇವೆ ಸಲ್ಲಿಸಿದ್ದರು. ಹಾಗೆಯೇ ಎಂಟು ಬಾರಿ ಶಾಸಕರಾಗಿದ್ದ ಅವರು ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ನವೆಂಬರ್ 25ರ ಸೋಮವಾರ ಅವರ ಹುಟ್ಟೂರಾದ ದೇವಾಸ್ ಜಿಲ್ಲೆಯ ಹತ್ಪಿಪಾಲ್ಯದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಸಂಸದ ಅಲೋಕ್ ಸಂಜರ್ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಾವಿನ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.