ಬೆಂಗಳೂರು, ನ.25(Daijiworld News/SS): ಉಪಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿನ ಗೊಂದಲ ಹಾಗೂ ಉಪ ಚುನಾವಣೆಯಲ್ಲಿ ಸಂಪನ್ಮೂಲದ ಕೊರತೆಯ ಬಗ್ಗೆ ವೇಣುಗೋಪಾಲ್ಗೆ ಸಿದ್ದರಾಮಯ್ಯ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಭೆಯ ಬಳಿಕ ಹಿರಿಯ ನಾಯಕರ ಅಸಹಕರಾದಿಂದ ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲದಿದ್ದರೆ ನಾನು ಹೊಣೆಗಾರನಲ್ಲ. ನೀವು ಟಾಸ್ಕ್ ಕೊಟ್ಟಿದ್ದೀರಿ ಆದರೆ, ಹಿರಿಯರು ಸಾಥ್ ಕೊಡುತ್ತಿಲ್ಲ. ಹೀಗಾಗಿ, ಉಪಚುನಾವಣಾ ಪ್ರಚಾರದ ಕಾಂಗ್ರೆಸ್ ಸಪ್ಪೆಯಾಗಿದ್ದು, ಒಬ್ಬಂಟಿ ಪ್ರಯತ್ನದಲ್ಲಿ ಹೈರಾಣಾಗಿದ್ದೇನೆ ಎಂಬ ಸಂದೇಶವನ್ನು ಹೈಕಮಾಂಡ್ಗೆ ರಾವಾನಿಸಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದರೂ, ಕಾಂಗ್ರೆಸ್ನಲ್ಲಿ ಮಾತ್ರ ನಾಯಕರ ನಡುವಿನ ಗೊಂದಲಕ್ಕೆ ತೆರೆ ಬೀಳದಿರುವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದೆ.