ಕಾಶ್ಮೀರ, ನ.25(Daijiworld News/SS): ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಹಾಗೂ ಸ್ಥಳೀಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಕಾಶ್ಮೀರವನ್ನು ಸಹಜ ಸ್ಥಿತಿಗೆ ಮರಳಿಸಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆಗಸ್ಟ್ 5ರಿಂದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಹೀಗಾಗಿ ಭೂ ಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ವಿಶೇಷ ದಳಗಳನ್ನು ಕಾಶ್ಮೀರ ಕಣಿವೆಯ ಕೆಲ ಪ್ರದೇಶಗಳಲ್ಲಿ ನಿಯೋಜಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ, ಎಲ್ಲೆಡೆ ಕರ್ಫ್ಯೂ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೇಜರ್ ಜನರಲ್ ಅಶೋಕ್ ಡಿಂಗ್ರಾ ನೇತೃತ್ವದ ಆರ್ಮಡ್ ಫೋರ್ಸಸ್ ಸ್ಪೆಷಲ್ ಆಪರೇಷನ್ ಡಿವಿಷನ್ ರೂಪಿಸಲಾಗಿದೆ. ಈ ವಿಶೇಷ ಪಡೆಯು ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ ಈ ತಂಡವು ಶ್ರೀನಗರ ತಲುಪಿದ್ದು, ಶೀಘ್ರವೇ ಕೆಲಸ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.