ಮಧ್ಯಪ್ರದೇಶ, ನ 25 (Daijiworld News/MB) : ಎರಡು ತಲೆ ಹಾಗೂ ಮೂರು ಕೈಗಳಿರುವ ಗಂಡು ಮಗು ಜನನವಾದ ಘಟನೆಯಾದ ಇಲ್ಲಿನ ವಿದಿಶಾ ಜಿಲ್ಲೆಯ ಗಾಂಜ್ ಬಸೋದಾ ಪ್ರದೇಶದಲ್ಲಿ ನಡೆದಿದೆ.
21 ವರ್ಷದ ಬಬಿತಾ ಅಹಿರ್ವಾರ್ ಎಂಬವರಿಗೆ ಈ ಮಗು ಜನಿಸಿದ್ದು ಮಗುವಿಗೆ 1 ಹೃದಯ ಇದ್ದರೂ ಎರಡು ತಲೆ ಹಾಗೂ ಮೂರು ಕೈಗಳಿವೆ. ಪ್ರಸ್ತುತ ಮಗುವನ್ನು ಐಸಿಯುವಿನಲ್ಲಿ ಇರಿಸಲಾಗಿದೆ.
ಒಂದುವರೆ ವರ್ಷದ ಹಿಂದೆ ಮದುವೆಯಾಗಿರುವ ಬಬಿತಾ ಅಹಿರ್ವಾರ್ ಅವರ ಮೊದಲ ಮಗು ಇದಾಗಿದೆ.
"ಇಂತಹ ಮಕ್ಕಳ ಜನನವಾಗುವುದು ಅಪರೂಪ. ಸೋನೋಗ್ರಫಿ ನಡೆಸಿದ ವೈದ್ಯರು ಅವಳಿ ಮಕ್ಕಳೆಂದು ತಿಳಿಸಿದ್ದು, ಶಸ್ತ್ರ ಚಿಕಿತ್ಸೆ ನಡೆಸಿದಾಗ ಅವಳಿ ಮಕ್ಕಳಾಗದೆ ಎರಡು ತಲೆ ಇರುವ ಬರೀ ಒಂದೇ ದೇಹವಿರುವ ಮಗುವಾಗಿ ಜನನವಾಗಿದೆ" ಎಂದು ಡಾ.ಸಂಜಯ್ ಖಾರೆ ತಿಳಿಸಿದ್ದಾರೆ.
ಈ ಮಗುವಿನ ಜನನದ ವಿಷಯ ತಿಳಿದ ಸಾರ್ವಜನಿಕರು ಮಗುವನ್ನು ನೋಡಲೆಂದು ಆಸ್ಪತ್ರೆಗೆ ಧಾವಿಸಿದ್ದಾರೆ.
ಡಾ. ಪ್ರತಿಭಾ ಓಸ್ವಲ್, "ಮಗುವಿಗೆ ಎರಡು ತಲೆ ಇದ್ದುದ್ದರಿಂದ ಈ ಶಸ್ತ್ರ ಚಿಕಿತ್ಸೆ ಬಹಳ ಕಷ್ಟಕರವಾಗಿತ್ತು. ಮಗುವಿಗೆ ಎರಡು ತಲೆ ಇರುವುದನ್ನು ತಿಳಿದ ಕುಟುಂಬಸ್ಥರು ಆಘಾತಕೊಳಗಾಗಿದ್ದು ತಾಯಿಗೆ ಈ ವಿಷಯವನ್ನು ತಿಳಿಸಿಲ್ಲ" ಎಂದು ಹೇಳಿದ್ದಾರೆ.
ಈ ಕುರಿತು "ಇಂತಹ ಮಕ್ಕಳ ಶಸ್ತ್ರ ಚಿಕಿತ್ಸೆ ನಡೆಸಿರುವ ಬೋಪಾಲ್, ದೆಹಲಿಯ ಮಕ್ಕಳ ತಜ್ಞರಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವುದರ ಕುರಿತು ಚರ್ಚಿಸಲಾಗುವುದು" ಎಂದು ಮಕ್ಕಳ ತಜ್ಞ ಸುರೇಂದ್ರ ಸೋನ್ಕರ್ ತಿಳಿಸಿದ್ದಾರೆ.