ನವದೆಹಲಿ, ನ 25 (Daijiworld News/MSP): ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷವೂ ಧಿಡೀರ್ ಆಗಿ ಸರ್ಕಾರ ರಚನೆ ಮಾಡಿದ ಘಟನೆ ಸಂಸತ್ತಿನಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ಲೋಕಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ , ಯುವ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ದ ಹರಿಹಾಯ್ದರು. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, "ಸರ್ಕಾರ ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ’ಕೊಲೆ’ ಮಾಡಿದೆ" ಎಂದು ಆರೋಪಿಸಿದರು.
ಈ ವೇಳೆ ಸರ್ಕಾರದ ನಡೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗಿಳಿದರು. ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಮಾತನಾಡಿದ ರಾಹುಲ್ ಗಾಂಧಿ, "ಮಹಾರಾಷ್ಟ್ರದಲ್ಲಿ ರಚನೆಯಾದ ಸರ್ಕಾರದ ಬಗ್ಗೆ ತಾನು ಯಾವುದೇ ಪ್ರಶ್ನೆ ಕೇಳಿ ಅರ್ಥವಿಲ್ಲ ಏಕೆಂದರೆ ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ" ಎಂದು ಆರೋಪಿಸಿದರು.
ಗದ್ದಲ ಗಲಾಟೆ ಜೋರಾಗಿದ ಸಂದರ್ಭ, ನಿಮ್ಮ ನಾಯಕ ಮಾತನಾಡುತ್ತಿದ್ದಾರೆ ಗಲಾಟೆ ಬಿಟ್ಟು ತಮ್ಮ ಸ್ಥಾನಕ್ಕೆ ಹಿಂತಿರುಗುವಂತೆ ಸ್ಪೀಕರ್ ಓಂ ಬಿರ್ಲಾ ಕೇಳಿಕೊಂಡರು ಆದಾಗ್ಯೂ, ಪ್ರತಿಭಟನೆ ಮುಂದುವರಿದ ಕಾರಣ ಸ್ವೀಕರ್ ಮಧ್ಯಾಹ್ನ 12 ಗಂಟೆಯವರೆಗೆ ಕಲಾಪ ಮುಂದೂಡಿದರು.
ಇನ್ನೊಂದೆಡೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾರಾಷ್ಟ್ರ ಸರ್ಕಾರ ರಚನೆಯ ವಿರುದ್ದ ಸಂಸತ್ತಿನ ಆವರಣದಲ್ಲಿ ನಡೆದ ಪಕ್ಷದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.