ನವದೆಹಲಿ, ನ 25 (Daijiworld News/MSP): ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ, " ಸುನ್ನಿ ವಕ್ಫ್ ಮಂಡಳಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸರ್ಕಾರ ನೀಡುತ್ತಿರುವ 5 ಎಕರೆ ಭೂಮಿಯನ್ನು ತೆಗೆದುಕೊಳ್ಳಲು ಬಯಸದಿದ್ದರೆ, ಆ ಸ್ಥಳದಲ್ಲಿ ಭಗವಾನ್ ಶ್ರೀರಾಮನ ಹೆಸರಲ್ಲಿ ಆಸ್ಪತ್ರೆ ನಿರ್ಮಿಸಲು ಶಿಯಾ ವಕ್ಫ್ ಮಂಡಳಿಗೆ ಅವಕಾಶ ನೀಡಬೇಕು ಎಂದು ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ವಿ ಹೇಳಿದ್ದಾರೆ.
"ಸುನ್ನಿ ವಕ್ಫ್ ಮಂಡಳಿ ಮತ್ತು ಎಐಎಂಪಿಎಲ್’ಬಿ ಸರ್ಕಾರ ನೀಡುವ 5 ಎಕರೆ ಭೂಮಿಯನ್ನು ಪಡೆದುಕೊಳ್ಳಲು ಬಯಸದಿದ್ದರೆ, ಅದನ್ನು ಶಿಯಾ ವಕ್ಫ್ ಮಂಡಳಿಗೆ ನೀಡಬೇಕು. ನಾವು ಅದೇ ಸ್ಥಳದಲ್ಲಿ ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸುವ ಜತೆಗೆ ಅದೇ ಪ್ರದೇಶದಲ್ಲಿ ಮಸೀದಿ , ದೇವಾಲಯ, ಗುರುದ್ವಾರ ಮತ್ತು ಚರ್ಚ್ ಅನ್ನು ನಿರ್ಮಿಸುತ್ತೇವೆ "ಎಂದು ರಿಜ್ವಿ ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದರು.
" ಯಾವುದೇ ವಿವಾದಗಳಿಲ್ಲದ ಶ್ರೀರಾಮನ ಬಗ್ಗೆ ಜಗತ್ತೇ ನಂಬಿಕೆ ಇರಿಸಿದೆ. ಮುಸ್ಲಿರ ನಂಬಿಕೆಯ ಪ್ರಕಾರ, ಪ್ರವಾದಿ ಮೊಹಮ್ಮದ್ ಅವರಿಗಿಂತ ಮುಂಚೆ ಜನಿಸಿದವರು ಮಹಾನ್ ಪ್ರವಾದಿಯ ಪೂರ್ವಜರು ಎಂಬ ನಂಬಿಕೆಯಿದೆ. ಸೌದಿ ಅರೇಬಿಯಾದಲ್ಲಿ ಪ್ರವಾದಿ ಮೊಹಮ್ಮದ್ ಜನಿಸಿದ ಬಗ್ಗೆ ಅಲ್ಲಿನ ಜನ ಹೆಮ್ಮೆಪಡುತ್ತಾರೆ. ಅಂತೆಯೇ ಸಾವಿರಾರು ವರ್ಷಗಳ ಹಿಂದೆ ಜನಿಸಿದ ಶ್ರೀರಾಮನ ಬಗ್ಗೆ ಭಾರತೀಯರು ಹೆಮ್ಮೆ ಪಡಲೇಬೇಕು ಎಂದು ಹೇಳಿದರು.
ಐದು ಎಕರೆ ಭೂಮಿಯನ್ನು ಸ್ವೀಕರಿಸಲು ನಿರಾಕರಿಸಿ ಹಾಗೂ ಸುಪ್ರಿಂ ನೀಡಿರುವ ಅಯೋಧ್ಯೆ ತೀರ್ಪನ್ನು ಮರು ಪರಿಶೀಲಿಸಿ ಅರ್ಜಿ ಸಲ್ಲಿಸಲು ನವೆಂಬರ್ 17 ರಂದು ಸಭೆ ನಡೆಸಿ ದಿ ಎಐಎಮ್ಪಿಎಲ್ಬಿ ನಿರ್ಧರಿಸಿತ್ತು. ಈ ಸಭೆಯಿಂದ ಸುನ್ನಿ ಸೆಂಟ್ರಲ್ ವಕ್ಪ್ ಬೋರ್ಡ್ ಹೊರಗುಳಿದಿತ್ತು.