ಪಂಜಾಬ್, ನ 25 (Daijiworld News/MB) : ಹದಿನಾರು ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಜೀವಂತವಾಗಿ ಸುಟ್ಟುಹಾಕಿದ ಅಮಾನುಷ ಘಟನೆ ಇಲ್ಲಿನ ಮಾನ್ಸಾದಲ್ಲಿ ನಡೆದಿದೆ.
ಮೃತ ಬಾಲಕ ಜಸ್ಪ್ರೀತ್ ಸಿಂಗ್ನನ್ನು ಮೊದಲು ಹಗ್ಗದಿಂದ ಕಂಬಕ್ಕೆ ಕಟ್ಟಲಾಗಿದ್ದು ನಂತರ ಅವನಿಗೆ ಪೆಟ್ರೋಲ್ ಸುರಿದು ಜೀವಂತ ಸುಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 23ರ ಶನಿವಾರ ಈ ಘಟನೆ ನಡೆದಿದ್ದು ಶವವನ್ನು ಭಾನುವಾರ ಬೆಳಿಗ್ಗೆ ಪೊಲೀಸರು ಪಡೆದು ಸಂಜೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಆರೋಪಿಗಳಾದ ಜಶನ್ ಸಿಂಗ್, ಗುರ್ಜೀತ್ ಸಿಂಗ್ ಮತ್ತು ರಾಜು ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದು, ಮೃತ ಬಾಲಕ ಜಸ್ಪ್ರೀತ್ ಹಾಗೂ ಆರೋಪಿಗಳು ದಲಿತ ಸಮುದಾಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
"ಮೃತ ಬಾಲಕನ ಹಿರಿಯ ಸಹೋದರ ಕುಲ್ವಿಂದರ್ ಸಿಂಗ್ ಅವರು ಸುಮಾರು ಎರಡೂವರೆ ವರ್ಷಗಳ ಹಿಂದೆ ಆರೋಪಿ ಜಶಾನ್ ಅವರ ಸಹೋದರಿ ರಾಜೊ ಕೌರ್ ಅವರೊಂದಿಗೆ ಓಡಿ ಹೋಗಿ ಮದುವೆಯಾಗಿದ್ದರು. ಪ್ರಸ್ತುತ ಅವರು ನಗರದಿಂದ 30 ಕಿ.ಮೀ ದೂರದಲ್ಲಿರುವ ಬುಧ್ಲಾಡಾದಲ್ಲಿ ವಾಸಿಸುತ್ತಿದ್ದು ಅವರಿಗೆ ಒಂದು ವರ್ಷದ ಮಗುವಿದೆ. ಆದರೆ ಈ ದಂಪತಿ ಮದುವೆಯಾದ ನಂತರ ಒಂದು ಬಾರಿಯೂ ಊರಿಗೆ ಬಂದಿಲ್ಲ. ಈ ಕುರಿತು ಆರೋಪಿ ಜಶನ್ ಮೃತ ಬಾಲಕನಿಗೆ ಛೇಡಿಸುತ್ತಿದ್ದು, ಇದುವೇ ಹತ್ಯೆಗೆ ಕಾರಣವಾಗಿರಬಹುದು" ಎಂದು ಮಾನ್ಸಾ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ಸುಖಜೀತ್ ಸಿಂಗ್ ತಿಳಿಸಿದ್ದಾರೆ.
ಹೆಣ್ಣಿನ ಮನೆಯವರು ಈ ಮದುವೆಯಿಂದ ಅಸಮಾಧಾನ ಹೊಂದಿದ್ದು, ದಂಪತಿಗೆ ಮನೆಗೆ ಬರಲು ಅವಕಾಶವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.
"ನವೆಂಬರ್ 22 ರ ಶುಕ್ರವಾರ ರಾತ್ರಿ ಜಶನ್, ಅವರ ಸಂಬಂಧಿ ಗುರ್ಜೀತ್ ಹಾಗೂ ಸ್ನೇಹಿತ ರಾಜು ಮನೆಗೆ ಬಂದು ಜಸ್ಪ್ರೀತ್ನನ್ನು ಎಲ್ಲೋ ಕರೆದುಕೊಂಡು ಹೋದರು. ಅವನು ಹಿಂದೆ ಬಾರದ್ದನ್ನು ಗಮನಿಸಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆವು. ಬಳಿಕ ಶೋಧ ಕಾರ್ಯ ಪ್ರಾರಂಭಿಸಿದಾಗ ಅಕ್ಕಿ ಮಿಲ್ಲ್ನ ಬಳಿ ಜಸ್ಪ್ರೀತ್ ಶವವು ಪತ್ತೆಯಾಗಿದೆ" ಎಂದು ಜಸ್ಪ್ರೀತ್ ಅವರ ತಂದೆ ಸೂರತ್ ಸಿಂಗ್ ಹೇಳಿದ್ದಾರೆ.
ಶವದ ಮರಣೋತ್ತರ ಪರೀಕ್ಷೆಯನ್ನು ಭಾನುವಾರ ಸಂಜೆ ಮಾಡಲಾಗಿದ್ದು ನಂತರ ಶವ ಸಂಸ್ಕಾರ ಮಾಡಲಾಗಿದೆ.
ಈ ಕುರಿತು ಮಾತಾನಾಡಿದ ಪಂಜಾಬ್ ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಮುಖ್ಯಸ್ಥ ತೇಜಿಂದರ್ ಕೌರ್, "ಆಯೋಗವು ದಲಿತರ ವಿರುದ್ಧ ಇತರ ಜಾತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಹೋರಾಟ ನಡೆಸಿದೆ. ದಲಿತರ ವಿರುದ್ಧ ದಲಿತರ ವಿಚಾರದಲ್ಲಿ ಅಲ್ಲ. ಆದರೆ ಈ ಘಟನೆ ಕ್ರೂರವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಅಪರಾಧಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು" ಎಂದು ತಿಳಿಸಿದ್ದಾರೆ.
ದಲಿತ ಸಂಘಟನೆ ಜಮೀನ್ ಪ್ರಪತಿ ಸಂಗ್ರಾಶ್ ಸಮಿತಿಯ ಅಧ್ಯಕ್ಷ ಮುಖೇಶ್ ಮಲೌದ್ , "ಅಪರಾಧ ಅಥವಾ ತಾರತಮ್ಯವು ಕೆಳಜಾತಿಯವರ ವಿರುದ್ಧ ಮೇಲ್ಜಾತಿಯವರಿಗೆ ಸಂಬಂಧಿಸಿದಾಗ ಮಾತ್ರ ನಾವು ಹೆಜ್ಜೆ ಹಾಕುತ್ತೇವೆ. ಆದರೆ ಇದು ನಾಚಿಕೆಗೇಡಿನ ಕೃತ್ಯ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ.