ಕೋಲ್ಕತ್ತಾ, ನ 25 (Daijiworld News/MB) : ಪಶ್ಚಿಮ ಬಂಗಾಳದಲ್ಲಿ 3 ಕ್ಷೇತ್ರಗಳಿಗೆ ಉಪ ಚುನಾವಣೆ ಮತದಾನ ನಡೆಯುತ್ತಿರುವಾಗ ಟಿಎಂಸಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ಥಳಿಸಿದ್ದು ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಒಂದಾದ ಕರೀಂಪುರ ವಿಧಾನಸಭಾ ಕ್ಷೇತ್ರದಿಂದ ಜಯ್ ಪ್ರಕಾಶ್ ಮಜುಂದಾರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕಿಳಿದಿದ್ದು, ಅವರಿಗೆ ಟಿಎಂಸಿಯ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅರೆ ಸೇನಾ ಪಡೆ ಬಂದು ಮಜುಂದಾರ್ ಅವರನ್ನು ರಕ್ಷಿಸಿದೆ.
ಈ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಕೋರಿ ಬೆಂಗಾಳದ ಬಿಜೆಪಿ ಮುಖಂಡ ಮುಕುಲ್ ರಾಯ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಹಲ್ಲೆ ಮಾಡಿರುವ ಟಿಎಂಸಿ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.
ಟಿಎಂಸಿ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡಿ ಮಜುಂದಾರ್ ಮತಕಟ್ಟೆಯ ಆವರಣವನ್ನು ಪ್ರವೇಶಿಸಿದ್ದು ಆ ಕಾರಣದಿಂದಾಗಿ ಮತದಾದರೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.