ಬಳ್ಳಾರಿ, ನ.26(Daijiworld News/SS): ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ನಮಗೆ ಜೆಡಿಎಸ್ ಅಷ್ಟೇ ಅಲ್ಲ ಯಾವುದೇ ಪಕ್ಷದ ಬೆಂಬಲ ಬೇಕಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರವ ಉಪ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇರೆ ಯಾವುದೇ ಪಕ್ಷದ ಬೆಂಬಲದ ಅಗತ್ಯವಿಲ್ಲ. ಮುಂದಿನ ಮೂರೂವರೆ ವರ್ಷ ಸ್ವಂತ ಬಲದಿಂದಲೇ ಸರ್ಕಾರ ನಡೆಸಿ, ಉತ್ತಮ ಆಡಳಿತ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಮೂರೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಬೇಕು ಎಂದು ರಾಜ್ಯದ ಜನ ಸಂಕಲ್ಪ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ 15 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ನಮಗೆ ಯಾವುದೇ ಪಕ್ಷದ ಬೆಂಬಲದ ಅಗತ್ಯವಿಲ್ಲ. ಈಗ ರಾಜ್ಯದಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿಲ್ಲ. ಅದು ಮೂರುವರೆ ವರ್ಷದ ಬಳಿಕ ಬರುತ್ತದೆ. ಆಗಲೂ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಾಗುವುದು ಎಂದು ತಿಳಿಸಿದರು.