ನವದೆಹಲಿ, ನ.26(Daijiworld News/SS): ಸಂವಿಧಾನದ ದಿನದ ಅಂಗವಾಗಿ ನಡೆಯಲಿರುವ ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಆದರೆ ಸಂಸತ್ತಿನ ಸೆಂಟ್ರಲ್ ಹಾಲ್'ನಲ್ಲಿ ಏರ್ಪಡಿಸಿರುವ ಸಂವಿಧಾನ ದಿನ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕಾಂಗ್ರೆಸ್ ಮತ್ತು ಇತರೆ ಎಲ್ಲಾ ವಿರೋಧ ಪಕ್ಷಗಳು ನಿರ್ಧರಿಸಿವೆ.
ಮಹಾರಾಷ್ಟ್ರದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿರುವುದನ್ನು ವಿರೋಧಿಸಿ ಸಂಸತ್'ನ ಅಂಬೇಡ್ಕರ್ ಪ್ರತಿಮೆ ಬಳಿ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಇಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಪ್ರತಿಭಟನೆ ನಡೆಸಲಿವೆ ಎನ್ನಲಾಗಿದೆ.
ಈ ನಡುವೆ ಜಂಟಿ ಅಧಿವೇಶನ ಬಹಿಷ್ಕರಿಸುವ ಪ್ರತಿಪಕ್ಷಗಳ ನಿರ್ಧಾರವನ್ನು ಬಿಜೆಪಿ ಖಂಡಿಸಿದ್ದು, '70ನೇ ಸಂವಿಧಾನದ ದಿನದಂದೇ(ನ.26) ಜಂಟಿ ಸದನವನ್ನು ಬಹಿಷ್ಕರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧಪಕ್ಷಗಳು ತೀರ್ಮಾನಿಸಿವೆ. ಇದು ಈ ಪಕ್ಷಗಳಿಂದ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಉಂಟಾಗುತ್ತಿರುವ ಮತ್ತೊಂದು ಅವಮಾನ ಎಂದು ಕಿಡಿಕಾರಿದೆ.