ಶಬರಿಮಲೆ ಚಾರಣಕ್ಕೆ ಮುಂದಾದ ಬಿಂದು ಅಮ್ಮಣ್ಣಿ ಮೇಲೆ ಪೆಪ್ಪರ್ ಸ್ಪ್ರೇ
Tue, Nov 26 2019 10:33:14 AM
ತಿರುವನಂತಪುರ,ನ 26 (Daijiworld News/MSP): ಕಳೆದ ವರ್ಷ ಶಬರಿಮಲೆ ಪ್ರವೇಶಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಬಿಂದು ಅಮ್ಮಣ್ಣಿ ಈ ಬಾರಿಯೂ ಮತ್ತೆ ಶಬರಿಮಲೆಯತ್ತ ಚಾರಣ ಮಾಡಲು ಪ್ರಯತ್ನಿಸಿದಾಗ ವ್ಯಕ್ತಿಯೊಬ್ಬರು ಆಕೆಯ ಮೇಲೆ ಪೆಪ್ಪರ್ ಸ್ಪ್ರೇನಿಂದ ದಾಳಿ ನಡೆಸಿದ ಘಟನೆ ಪೊಲೀಸ್ ಕಮಿಷನರ್ ಕಚೇರಿಯ ಹೊರಗಡೆ ನಡೆದಿದೆ ಎಂದು ವರದಿಯಾಗಿದೆ.
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇದರಲ್ಲಿ ಬಿಂದು ಅಮ್ಮಣ್ಣಿ ವ್ಯಕ್ತಿಯೋರ್ವ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದಾಗ, ಆಕೆ ಮುಖವನ್ನು ಮುಚ್ಚುತ್ತಾ ಆತನಿಂದ ರಕ್ಷಣೆ ಪಡೆಯಲು ದೂರ ಓಡಿಹೋಗುವ ದೃಶ್ಯ ದಾಖಲಾಗಿದೆ. ಮತ್ತೊಂದೆಡೆ ಆಕೆ "ಶಬರಿಮಲೆಗೆ ಮಹಿಳೆಯರ ಭೇಟಿಯನ್ನು ತಡೆಯುವಂತಿಲ್ಲ ನ್ಯಾಯಾಂಗ ನಿಂದನೆಯಾಗುತ್ತದೆ" ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಿರುವಾಗ ಆಕೆಯ ಹೇಳಿಕೆಯನ್ನು ವಿರೋಧಿಸಿ ಮದ್ಯವಯಸ್ಕ ವ್ಯಕ್ತಿಗೆ ಬಿಂದು ಅಮ್ಮಣ್ಣಿ ಕೋಪಗೊಂಡು ತನ್ನ ಕೈ- ಮುಖಕ್ಕೆ ಅಂಟಿದ್ದ ಪೆಪ್ಪರ್ ಸ್ಪ್ರೇಯನ್ನು ಆತನ ಮುಖಕ್ಕೆ ಹಚ್ಚುವ ದೃಶ್ಯವೂ ಕಂಡುಬಂದಿದೆ. ಸದ್ಯ ಬಿಂದು ಅಮ್ಮಣ್ಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನೊಂದೆಡೆ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಕೊಚ್ಚಿಗೆ ಬಂದಿಳಿದಿದ್ದು, ಇಂದು ಶಬರಿ ಮಲೆಗೆ ಏರುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸರಕಾರ ಅಥವಾ ಸ್ಥಳೀಯ ಪೊಲೀಸರು ನನ್ನನ್ನು ತಡೆದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುವುದು ನನ್ನ ಹಕ್ಕು, ಸರ್ಕಾರ ರಕ್ಷಣೆ ನೀಡಿದರೂ ನೀಡದಿದ್ದರೂ ನಾನು ಶಬರಿಮಲೆ ಏರಿಯೇ ಸಿದ್ದ ಎಂದು ಹೇಳಿದ್ದಾರೆ.
ಕನಕದುರ್ಗ (42) ಮತ್ತು ಬಿಂದು ಅಮ್ಮಣ್ಣಿ (44) ಶಬರಿಮಲೆ ದೇಗುಲವನ್ನು ಕಳೆದ ವರ್ಷದ ಜನವರಿಯ ಮೊದಲ ವಾರದಲ್ಲಿ ಮುಂಜಾನೆ 3.45ಕ್ಕೆ ಪೊಲೀಸರ ಬಿಗಿ ಭದ್ರತೆಯೊಂದಿಗೆ ಶಬರಿಮಲೆ ದೇಗುಲದ ಉತ್ತರ ದ್ವಾರದಿಂದ ಪ್ರವೇಶಿಸಿದ್ದರು.