ಭೋಪಾಲ್, ನ 26 (Daijiworld News/MB) : ಈ ಮೊದಲು ಮೂನ್ ವಾಕ್ ಮಾಡಿ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ನ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಈಗ ಅದೇ ವ್ಯಕ್ತಿಯು ಆಟೋ ಚಾಲಕನನ್ನು ಥಳಿಸುವ ವಿಡಿಯೋ ವೈರಲ್ ಆಗಿದ್ದು ಅಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರು ಇಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸ್ ಆಗಿದ್ದ ರಂಜಿತ್ ಸಿಂಗ್ ನೃತ್ಯದ ಮೂಲಕ ಟ್ರಾಫಿಕ್ ನಿರ್ವಹಣೆ ಮಾಡಿ ಸಿಂಗಂ ಎಂದು ಕರೆಸಿಕೊಂಡಿದ್ದರು.
ಆಟೋ ಚಾಲಕನೋರ್ವ ನೋ ಎಂಟ್ರಿ ರಸ್ತೆಯಲ್ಲಿ ಬಂದ ಕಾರಣಕ್ಕೆ ಆತನನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ ಹಿಗ್ಗಮುಗ್ಗ ಥಳಿಸಿದ್ದು ಇದನ್ನು ವಿಡಿಯೋ ಮಾಡಿದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಟ್ರಾಫಿಕ್ ಜಾಂ ಆದ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ಮೂನ್ ವಾಕ್ ಮಾಡಿ ಟ್ರಾಫಿಕ್ ನಿರ್ವಹಿಸುತ್ತಿದ್ದ ರಂಜಿತ್ ಸಿಂಗ್ ಅವರಿಗೆ ಫೇಸ್ಬುಕ್ನಲ್ಲ ಸುಮಾರು ೫೦ ಸಾವಿರಕ್ಕಿಂತ ಅಧಿಕ ಫಾಲೋವರ್ಸ್ ಇದ್ದು ತಾಳ್ಮೆಗೆ ಹೆಸರಾಗಿದ್ದ ಅವರು ಈಗ ತಾಳ್ಮೆ ಕಳೆದುಕೊಂಡಿದಕ್ಕಾಗಿ ಜನರು ಸಿಡಿಮಿಡಿಗೊಂಡಿದ್ದಾರೆ.
ನೆಟ್ಟಿಗರು "ಆಟೊಡ್ರೈವರ್ ಅನ್ನು ಹೊಡೆಯುವ ಹಕ್ಕನ್ನು ನಿಮಗೆ ಯಾರು ಕೊಟ್ಟರು? ಅವನು ತಪ್ಪು ಮಾಡಿರಬಹುದು. ಆದರೆ ಹೊಡೆಯುವಂತ ತಪ್ಪೇನಲ್ಲ. ನಿಮಗೆ ಇಂದೋರ್ನ ಘನತೆ ಹೆಚ್ಚಿಸಲು ಸಾಧ್ಯವಾಗದಿದ್ದರೆ ಪರವಾಗಿಲ್ಲ. ಇಂದೋರ್ನ ಘನತೆಗೆ ದಕ್ಕೆ ತರಬೇಡಿ" ಎಂದು ಹೇಳಿದ್ದಾರೆ.
ಈ ಹಿಂದೆ ರಂಜಿತ್ ತಾನು ಟ್ರಾಫಿಕ್ ಪೊಲೀಸ್ ಆಗಿರುವ ದಾರಿಯಲ್ಲಿ ಟ್ರಾಫಿಕ್ ಜಾಂ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದು, ಭಾರತೀಯ ವಿಶ್ವವಿದ್ಯಾನಿಲಯವು ಈ ಕುರಿತು ಅಧ್ಯಯನ ನಡೆಸುತ್ತಿದೆ.