ಮುಂಬೈ, ನ 26 (Daijiworld News/MSP): ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದ್ದು ನಾಳೆ ಸಂಜೆ 5 ಗಂಟೆಯೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸಿ ಎಂದು ಆದೇಶ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪ್ರಥ್ವಿರಾಜ್ ಚೌಹಣ್ ಮತ್ತು ಎನ್ ಸಿಪಿಯ ನವಾಬ್ ಮಲಿಕ್ ಸ್ವಾಗತಿಸಿ ನಾಳೆ " ಮಹಾರಾಷ್ಟ್ರದಲ್ಲಿ ಬಿಜೆಪಿ ಗೇಮ್ ಓವರ್ " ಎಂದು ಹೇಳಿದ್ದಾರೆ.
ಸುಪ್ರೀಂ ತೀರ್ಪನ್ನು ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸ್ವಾಗತಿಸಿದ್ದು," ನಾಳೆ ಬಹುಮತ ಸಾಬೀತಾಗದೇ ಹೋಗುವುದಕ್ಕಿಂದ ಇಂದೇ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸುವುದು ಸೂಕ್ತ" ಎಂದು ಕಾಂಗ್ರೆಸ್ ನಾಯಕ ಪ್ರಥ್ವಿರಾಜ್ ಚೌಹಣ್ ಆಗ್ರಹಿಸಿದ್ದಾರೆ.
"ನಾಳೆಗೆ ೫ ಗಂಟೆ ಒಳಗೆ ಬಿಜೆಪಿ ಆಟ ಮುಕ್ತಾಯವಾಗಲಿದ್ದು ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿಸರ್ಕಾರ ಅಧಿಕಾರಕ್ಕೆ ಬರಲಿದೆ" ಎಂದು ಎನ್ ಸಿಪಿಯ ನವಾಬ್ ಮಲಿಕ್ ಹೇಳಿದ್ದಾರೆ.
ಸುಪ್ರಿಂ ಕೋರ್ಟ್, " ಶೀಘ್ರವೇ ಸ್ಪೀಕರ್ ನೇಮಿಸಿ ಮತದಾನ ಪ್ರಕ್ರಿಯೆಯನ್ನು ಗೌಪ್ಯವಾಗಿಡದೇ ನೇರ ಪ್ರಸಾರ ಮಾಡಿ ಬುಧವಾರ ಸಂಜೆ 5 ಗಂಟೆಯ ಒಳಗೆ ಬಹುಮತ ಸಾಬೀತು ಪಡಿಸಬೇಕು" ಎಂದು ಹೇಳಿದೆ. ಹೀಗಾಗಿ ನಾಳೆ ದೇವೇಂದ್ರ ಫಡ್ನವಿಸ್ ಅವರಿಗೆ ಅಗ್ನಿಪರೀಕ್ಷೆಯ ಸಮಯವಾಗಿದೆ.