ಹುಬ್ಬಳ್ಳಿ, ನ 26 (Daijiworld News/MB) : ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂಪಡೆದು ಕಳ್ಳರು ಹಾಗೂ ದರೋಡೆಕೋರರು ಅಧಿಕಾರ ಪಡೆದಿದ್ದಾರೆ. ಅದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಪ್ರಜಾಪ್ರಭುತ್ವ ಉಳಿಯುವುದು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿ ಮಾತಾನಾಡಿದ ಅವರು ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಬೇಕು ಎಂಬ ಮನೋಭಾವ ಬಿಜೆಪಿಯವರಿಗೆ ಇಲ್ಲ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವುದೇ ಪ್ರಜಾಪ್ರಭುತ್ವ. ಆದರೆ ಬಿಜೆಪಿಯವರು ಬರೀ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಪಡೆಯುತ್ತಾರೆ. ಯಾರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲವೋ ಅವರು ಇಂತಹ ಕೆಲಸವನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿನ ಎನ್ಸಿಪಿ ನಾಯಕ ಅಜಿತ್ ಪವಾರ್ ಮೇಲೆ ಹಲವು ಪ್ರಕರಣಗಳು ಇವೆ. ಆದ್ದರಿಂದ ತನ್ನ ಮೇಲೆ ಇರುವ ಪ್ರಕರಣಗಳನ್ನು ವಜಾಗೊಳಿಸಲು ಬಿಜೆಪಿಗೆ ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಹಾಗೆಯೇ ಬಿಜೆಪಿಯವರು ನಮ್ಮ ಸಂಪರ್ಕದಲ್ಲಿಯೂ ಇದ್ದಾರೆ. ಆದರೆ ನಾವು ಯಾವತ್ತಾದರೂ ಅವರನ್ನು ಕರೆದಿದ್ದೇವಾ? ಈಗಾಗಲೇ ಹೋಗಬೇಕಾದ ಶಾಸಕರು ಹೋಗಿದ್ದಾರೆ. ಇನ್ನೂ ಯಾವ ಶಾಸಕರು ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.