ಹೊನ್ನಾವರ, ನ 26 (Daijiworld News/MSP): ಪತಿ ಪತ್ನಿ ಬೇರೆ ಬೇರೆ ಸ್ಥಳದಲ್ಲಿದ್ದರೂ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಒಂದೇ ದಿನ ಹೃದಯಾಘಾತವಾಗಿ ಸಾವಿನಲ್ಲೂ ಜೊತೆಯಾದ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.
ಕರ್ಕಿ ನಿವಾಸಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ವೆಂಕಟೇಶ ಕೊಡಿಯಾ (58) ಅವರ ಪತ್ನಿ ಮಾದೇವಿ ಮದುವೆ ಸಮಾರಂಭಕ್ಕೆಂದು ಸಾಗರದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಆದರೆ ನ. 26ರ ಬೆಳಗ್ಗೆ ನಾಲ್ಕು ಗಂಟೆಗೆ ಅತ್ತ ಕಡೆ ವೆಂಕಟೇಶ್ ಅವರಿಗೆ ತೀವ್ರವಾಗಿ ಎದೆನೋವು ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿಮಧ್ಯೆ ಅಸುನೀಗಿದ್ದಾರೆ.
ಇತ್ತ ಮಗಳ ಮನೆಯಲ್ಲಿ ಮಾದೇವಿ ಅವರು ಅಶ್ಚರ್ಯ ಎಂಬಂತೆ ಬೆಳಗ್ಗೆ 4 ಗಂಟೆಗೆ ಅದೇ ಸಮಯಕ್ಕೆ ನಿದ್ದೆಯಿಂದ ಎಚ್ಚರಗೊಂಡು ಕೆಟ್ಟ ಕನಸು ಬಿದ್ದಿದೆ ಎಂದಿದ್ದಾರೆ. ಮನೆ ಮಂದಿ ಮತ್ತೆ ಸಮಾಧಾನ ಪಡಿಸಿ ಮಲಗಿಸಿದ್ದಾರೆ ಆದರೆ ಅವರು ಮತ್ತೆ ಎಚ್ಚರವಾಗಲೇ ಇಲ್ಲ. ಅತ್ತ ಕಡೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಪತಿ ಸಾವನ್ನಪ್ಪಿದರೆ ಇತ್ತ ಪತ್ನಿ ಮಲಗಿದ್ದಲ್ಲೇ ಅಸುನೀಗಿದ್ದರು.
ಸಂಬಂಧಿಕರು ವಿಧಿಯಾಟದಿಂದ ಅಘಾತಕ್ಕೆ ಒಳಗಾಗಿ, ಸಾವಿನ ಮನೆಗೆ ಜೊತೆಯಾಗಿ ನಡೆದ ದಂಪತಿಯ ನೋಡಿ ಎಲ್ಲರ ಕಣ್ಣಂಚು ಒದ್ದೆಯಾಗಿತ್ತು.