ಮುಂಬೈ ನ 26 (Daijiworld News/MSP): ಬುಧವಾರ ಸಂಜೆ 5.30ರ ಒಳಗೆ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರದ ರಾಜಕೀಯದಲ್ಲಿ ಮಹಾ ಪ್ರಹಸನ ನಡೆದಿದ್ದು, ಉಪಮುಖ್ಯಮಂತ್ರಿ ಹುದ್ದೆಗೆ ಅಜಿತ್ ಪವಾರ್ ಸೂಚಿಸಿದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ 3:30 ಕ್ಕೆ ಮುಂಬೈನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ದೇವೇಂದ್ರ ಫಡ್ನವೀಸ್ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿತ್ತು ಆದರೆ ಶಿವಸೇನೆ ಚುನಾವಣಾ ಫಲಿತಾಂಶದ ಬಳಿಕ ತನ್ನ ವರಸೆ ಬದಲಾಯಿಸಿತು. ನಮ್ಮಲ್ಲಿ ಅಗತ್ಯ ಬಹುಮತದ ಕೊರತೆ ಹಿನ್ನಲೆಯಲ್ಲಿ ರಾಜೀನಾಮೆ ನೀಡಬೇಕಾಗಿದೆ ಎಂದು ದೂರಿದ್ದಾರೆ.
ಅಜಿತ್ ಪವಾರ್ ಅವರು ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನನ್ನ ಬಳಿ ಯಾವುದೇ ಆಯ್ಕೆ ಉಳಿದುಕೊಂಡಿರಲಿಲ್ಲ. ಹೀಗಾಗಿ ರಾಜೀನಾಮೆ ನೀಡಲು ರಾಜ್ಯಪಾಲರ ಬಳಿ ತೆರಳುತ್ತಿದ್ದೇನೆ ಎಂದು ಹೇಳಿದರು.