ಮುಂಬೈ, ನ 26 (Daijiworld News/MB) : ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಮಹಾ ತಿರುವು ಆಗಿದ್ದು ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಮತ್ತು ಮುಖ್ಯ ಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ "ಮುಂದೆ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಶಿವಸೇನೆಯ ಮುಖ್ಯಸ್ಥ ಸಂಜಯ್ ರಾವತ್ ತಿಳಿಸಿದ್ದಾರೆ.
ಅಕ್ಟೋಬರ್ 21ರಂದು 288 ಸ್ಥಾನಗಳಿಗೆ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ ನಡೆದಿದ್ದು ಅಕ್ಟೋಬರ್ 24 ರಂದು ಫಲಿತಾಂಶ ಹೊರಬಿದಿದ್ದೆ. ಈ ಫಲಿತಾಂಶದ ಪ್ರಕಾರ ಬಿಜೆಪಿಗೆ 105 , ಎನ್ಸಿಪಿಗೆ 54 , ಕಾಂಗ್ರೆಸ್ಗೆ 44 ಸ್ಥಾನಗಳಲ್ಲಿ ಜಯಗಳಿಸುತ್ತು.
ಯಾವ ಪಕ್ಷಗಳಿಗೂ ಸರಕಾರ ರಚನೆಗೆ ಬಹುಮತವಿಲ್ಲದ ಕಾರಣ ಸರಕಾರ ರಚನೆಗೆ ವಿಳಂಬವಾಗಿದ್ದು ನವೆಂಬರ್ 9 ರಂದು ರಾಜ್ಯಪಾಲರು ಬಿಜೆಪಿಗೆ ಬಹುಮತ ಸಾಬೀತು ಪಡಿಸಿ ಸರಕಾರ ರಚಿಸಲು ಆಹ್ವಾನ ನೀಡಿದ್ದರು. ಆದರೆ ಬಿಜೆಪಿ ಸರಕಾರ ರಚನೆ ಮಾಡಲು ಹಿಂದೇಟು ಹಾಕಿತು.
ನಂತರ ರಾಜ್ಯಪಾಲರು ಶಿವಸೇನೆಗೆ ಸರಕಾರ ರಚನೆ ಮಾಡಲು ಆಹ್ವಾನ ನೀಡಿದ್ದು 24 ಗಂಟೆಗಳಲ್ಲಿ ಸರಕಾರ ರಚನೆಯಾಗದ ಹಿನ್ನಲ್ಲೆಯಲ್ಲಿ ಎನ್ಸಿಪಿ ಪಕ್ಷಕ್ಕೆ ರಾಜ್ಯಪಾಲರು ಆಹ್ವಾನ ನೀಡಿದರು. ಅದರ ಬಳಿಕ ನವೆಂಬರ್ 12ರಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು.
ಈ ಎಲ್ಲಾ ಗೊಂದಲಗಳು ಕೊನೆಗೊಂಡು ನವೆಂಬರ್ 22ರಂದು ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಸೇರಿ 'ಮಹಾರಾಷ್ಟ್ರ ವಿಕಾಸ್ ಅಘಾಡ' ಹೆಸರಿನ ಮೈತ್ರಿಕೂಟ ಘೋಷಣೆ ಮಾಡಿದ್ದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು.
ಆದರೆ ರಾತ್ರೋರಾತ್ರಿ ಆದ ಬದಲಾವಣೆಯಿಂದ ನವೆಂಬರ್ 23 ಕ್ಕೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅಜಿತ್ ಪವಾರ್ ಎನ್ಸಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿದೆ ಎಂದು ಹೇಳಿದ್ದು, ಶರತ್ ಪವಾರ್ ಇದನ್ನು ಅಲ್ಲಗಳೆದು ಇದು ಅಜಿತ್ ಪವಾರ್ ನ ವೈಯಕ್ತಿಕ ನಿರ್ಧಾರ ಎಂದು ಹೇಳಿದರು.
ರಾಜ್ಯಪಾಲರು ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟದನ್ನು ಪ್ರಶ್ನಿಸಿ ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನೆ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು ಅದರ ತೀರ್ಪಿನಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನವೆಂಬರ್ 27ರ ಸಂಜೆ ೫ರ ಒಳಗೆ ಮುಕ್ತಾಯವಾಗಿ ಬಹುಮತ ಸಾಬೀತಾಗಬೇಕಿತ್ತು.
ಇದಕ್ಕೂ ಮುಂಚೆ ಶರತ್ ಪವಾರ್ ನ್ನು ಭೇಟಿಯಾದ ಅಜಿತ್ ಪವಾರ್ ಯೂಟರ್ನ್ ಹೊಡೆದಿದ್ದು, ಉಪಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಂತರ "ಮುಂದೆ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಲಿದ್ದು, ಮುಂದಿನ 5 ವರ್ಷವೂ ಉದ್ಧವ್ ಠಾಕ್ರೆಯವರೇ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಶಿವಸೇನೆಯ ಮುಖ್ಯಸ್ಥ ಸಂಜಯ್ ರಾವತ್ ತಿಳಿಸಿದ್ದಾರೆ.
ಎನ್ಸಿಪಿಯ ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ ನ ಬಾಳಸಾಹೇಬ್ ಥೋರಟ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.