ಬೆಂಗಳೂರು, ನ.27(Daijiworld News/SS): ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಕಳೆದ ತಿಂಗಳು ಹೆಚ್ಚು ಮಳೆಯಾದ ಹಿನ್ನೆಲೆ, ಈರುಳ್ಳಿ ದರ ಮತ್ತೆ ಗಗನಕ್ಕೇರಿದ್ದು, 100ರ ಗಡಿ ಮುಟ್ಟಿದೆ.
ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ಕೇಂದ್ರ ಸರಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ. ಆದರೂ ಈರುಳ್ಳಿ ದರದಲ್ಲಿ ಏರಿಕೆಯಾಗುತ್ತಲೇ ಇದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಹೀಗೆ ಯಾವ ರಾಜ್ಯವೂ ಬೆಲೆ ಏರಿಕೆಯ ಹೊಡೆತದಿಂದ ತಪ್ಪಿಸಿಕೊಂಡಿಲ್ಲ.
ಕಳೆದ ತಿಂಗಳು ಹೆಚ್ಚು ಮಳೆಯಾದ ಹಿನ್ನೆಲೆ, ಈರುಳ್ಳಿ ಕೊಯ್ಲಿಗೆ ಬರಲು 3-4 ವಾರ ಬಾಕಿಯಿರುವಾಗ ಹೆಚ್ಚು ಮಳೆ ಬಿದ್ದು ಫಸಲು ಹಾಳಾಯಿತು. ಹೀಗಾಗಿ, ಎಕರೆಗೆ ಸರಾಸರಿ 200 ಚೀಲ ಸಿಗುತ್ತಿದ್ದ ಈರುಳ್ಳಿ ಕೇವಲ 50 ಮೂಟೆ ಲಭ್ಯವಾಗಿದೆ ಎನ್ನಲಾಗಿದೆ. ಈರುಳ್ಳಿಗೆ ಹೆಚ್ಚು ಬೇಡಿಕೆಯಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದೆ ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿನ ಸಗಟು ದರದಲ್ಲಿ ಪೂನಾದ ದಪ್ಪ ಈರುಳ್ಳಿ ಕೆ.ಜಿ.ಗೆ 90 ರೂ. ಇದ್ದರೆ, ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತಿತರ ಭಾಗಗಳ ಮಧ್ಯಮ ಗಾತ್ರದ ಈರುಳ್ಳಿ ದರ ಕೆ.ಜಿ.ಗೆ 60-70 ರೂ.ಗೆ ಮಾರಾಟವಾಗಿದೆ.