ರಾಣೆಬೆನ್ನೂರು, ನ 27 (Daijiworld News/MB) : ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಸಿಡಿಮಿಡಿಗೊಂಡ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಏಕವಚನದಲ್ಲೇ " ನಾನು ನನ್ನ ಅಪ್ಪನ ಹಣದಿಂದ ಸಾಲ ಮನ್ನಾ ಮಾಡಿಲ್ಲ. ಆದರೆ ಮಿಸ್ಟರ್ ಯಡಿಯೂರಪ್ಪ ನೀನೇನು ಮಾಡಿದ್ದಿ? ಹರಕಲು ಸೀರೆ ಮುರುಕಲು ಸೈಕಲ್ ಕೊಟ್ಟೆ" ಎಂದು ಕಿಡಿಕಾರಿದ್ದಾರೆ.
ಉಪಚುನಾವಣೆಯ ಹಿನ್ನಲೆಯಲ್ಲಿ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ನಾನು ನನ್ನ ಮನೆಯಿಂದ ಹಣ ತಂದು ಸಾಲಮನ್ನಾ ಮಾಡಲಿಲ್ಲ. ಜನರ ಹಣವನ್ನು ಜನರಿಗಾಗಿಯೇ ಖರ್ಚು ಮಾಡಿದ್ದೇನೆ. 30 ಸಾವಿರ ಕೋಟಿ ಸಾಲ ಮನ್ನಾವನ್ನು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿದ್ದರು. ನಾನು ಆಹಣವನ್ನು ತೀರಿಸಲೇ ಬೇಕಾಯಿತು ಎಂದು ಹೇಳಿದ ಅವರು ಆಪರೇಷನ್ ಮಾಡಿರುವುದೇ ಯಡಿಯೂರಪ್ಪನವರ ಸಾಧನೆ ಎಂದು ವ್ಯಂಗ್ಯ ಮಾಡಿದರು.
ಈ ಹಿಂದೆ ಯಡಿಯೂರಪ್ಪ, "ನಾನು ನನ್ನ ಅಪ್ಪನ ಹಣದಿಂದ ಸಾಲಮನ್ನಾ ಮಾಡಲಿಲ್ಲ" ಎಂದು ಹೇಳಿದ್ದರು.
"ನೀವು 17 ಶಾಸಕರು ರಾಜೀನಾಮೆ ಕೊಡುವಂತೆ ಮಾಡಿದಿರಿ. ಅದರಿಂದಾಗಿ ಉಪಚುನಾವಣೆ ಮಾಡಬೇಕಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಹಣನೀಡಿ, ಅಧಿಕಾರದ ಆಮಿಷವೊಡ್ಡಿ ಚುನಾಯಿತ ಪ್ರತಿನಿಧಿಗಳನ್ನು ಪಕ್ಷಾಂತರ ಮಾಡಲಾಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಅಂಟಿದ ರೋಗ. ಈ ಕಾರಣದಿಂದಲ್ಲೇ ರಾಜೀವಗಾಂಧಿಯವರು 1985ರಲ್ಲಿ ಪ್ರಧಾನಿಯಾಗಿದ್ದಾಗ ಸಂವಿಧಾನದಲ್ಲಿ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ 17 ಶಾಸಕರನ್ನು ಸಂವಿಧಾನದ 10ನೇ ಶೆಡ್ಯೂಲ್ ಉಲ್ಲಂಘನೆ ಮಾಡಿದ್ದಾಗ ಅನರ್ಹ ಮಾಡಲಾಯಿತು. ಈ ಅನರ್ಹ ಶಾಸಕರು ನಾಲಾಯಕ್" ಎಂದು ಸಿದ್ಧರಾಮಯ್ಯ ಹೇಳಿದರು.