ಮುಂಬೈ, ನ 27 (Daijiworld News/MB) : ಮಹಾರಾಷ್ಟ್ರ ಮುಖ್ಯಂತ್ರಿಯಾಗಿ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಶಿವಸೇನೆ ಹೇಳಿದೆ. ಹಾಗೆಯೇ ಕೇಂದ್ರ ಗೃಹ ಸಚಿವ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದೆ.
ಶಿವಸೇನೆಯು ದಶಕಗಳಿಂದ ಬಿಜೆಪಿಯ ಮೈತ್ರಿ ಪಕ್ಷವಾಗಿದ್ದು ಇದೀಗ ದೂರವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಉದ್ಧವ್ ಠಾಕ್ರೆಗೆ ಅಧಿಕಾರ ಸಿಗಬಾರದು ಎಂದು ಬಯಸಿದ್ದರು ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಹೀಗಿರುವಾಗ ಈ ಇಬ್ಬರು ನಾಯಕರುಗಳು ಉದ್ದವ್ ಠಾಕ್ರೆಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಬಹುದೇ ಎಂಬ ಅನುಮಾನವು ಇದೆ.
ಡಿಸೆಂಬರ್ 1ರಂದು ಮುಂಬೈನ ಪ್ರತಿಷ್ಠಿತ ಶಿವಾಜಿ ಪಾರ್ಕ್ನಲ್ಲಿ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ನಂತರ ನವೆಂಬರ್ 28ರಂದೇ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಎಂದು ಘೋಷಣೆ ಮಾಡಿದರು.
ಮಾಧ್ಯಮ ಪ್ರತಿನಿಧಿಗಳು ಶಿವಸೇನಾ ನಾಯಕ ಸಂಜಯ್ ರಾವತ್ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಅವರಿಗೆ ಆಹ್ವಾನ ನೀಡುವುದಿಲ್ಲವೇ' ಎಂದು ಪ್ರಶ್ನಿಸಿದ್ದು 'ಅಮಿತ್ ಶಾ ಸೇರಿದಂತೆ ಎಲ್ಲರನ್ನೂ ನಾವು ಆಹ್ವಾನಿಸುತ್ತೇವೆ' ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಸೇನೆ ಹಾಗೂ ಬಿಜೆಪಿ ವಿಧಾನಸಭಾ ಚುನಾವಣೆಗೆ ಮೊದಲೇ ಮೈತ್ರಿ ಮಾಡಿಕೊಂಡಿದ್ದು ಸ್ಥಾನ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಚುನಾವಣೆಯ ಬಳಿಕ ಎರಡು ಪಕ್ಷಗಳು ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟ ಕಾರಣ ಮೈತ್ರಿ ಮುರಿದು ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಸರಕಾರ ರಚನೆಗೆ ಮುಂದಾಯಿತು. ಶಿವಸೇನೆಯ ಠಾಕ್ರೆ ಮುಖ್ಯಂತ್ರಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ರಾತ್ರಿಬೆಳಗಾಗುವುದರಲ್ಲಿ ಎನ್ಸಿಪಿಯ ಅಜಿತ್ ಪವಾರ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಎನ್ಸಿಪಿ ಮುಖ್ಯಸ್ಥ ಶರತ್ ಪವಾರ್ ಈ ಮೈತ್ರಿಗೆ ಒಪ್ಪಿಗೆ ನೀಡಲಿಲ್ಲ.
ಈ ನಡುವೆ ಸರಕಾರ ರಚನೆ ಪ್ರಶ್ನಿಸಿ ಮೂರು ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಸಂಬಂಧ ಮಂಗಳವಾರ (ನ.26) ಆದೇಶ ನೀಡಿದ ಸುಪ್ರೀಂ ಕೋರ್ಟ್ ಬುಧವಾರವೇ (ನ.27) ವಿಶ್ವಾಸಮತ ಯಾಚಿಸಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರ ದೇವೇಂದ್ರ ಫಡಣವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದು ಮತ್ತೊಮ್ಮೆ ಖಚಿತವಾಯಿತು.