ಚಿಕ್ಕಬಳ್ಳಾಪುರ, ನ 27 (Daijiworld News/MB) : "ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಲು ನಾನೇ ಪ್ರಮುಖ ಕಾರಣ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಹೇಳಿದ್ದಾರೆ.
ಅನರ್ಹ ಶಾಸಕರಿಂದ ತೆರವುಗೊಂಡ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ರೋಡ್ ಶೋ ಮೂಲಕ ನವೆಂಬರ್ 26 ರ ಮಂಗಳವಾರ ಪ್ರಚಾರ ನಡೆಸಿದ ಅವರು "ಅಧಿಕಾರಕ್ಕಾಗಿ ರಾತ್ರೋರಾತ್ರಿ ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿತು. ಆದರೆ ಅವರ ಮಂತ್ರಿ ಮಂಡಲದಲ್ಲಿದ್ದ ಸಿಎಂ ಒಬ್ಬರು. ಸೂಪರ್ ಸಿಎಂ ಆಡಳಿತದಿಂದ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಯಿತು" ಎಂದು ಹೇಳಿದರು.
ಬಿಜೆಪಿಯು ಚಿಕ್ಕಬಳ್ಳಾಪುರದ ಒಕ್ಕಲಿಗ ಸಮುದಾಯದ ಮತಗಳನ್ನು ವಿಭಜನೆ ಮಾಡುವ ಹಿನ್ನಲೆಯಲ್ಲಿ ಒಕ್ಕಲಿಗ ನಾಯಕನಾಗಿರುವ ಎಸ್ ಎಂ ಕೃಷ್ಣ ಪ್ರಚಾರಕ್ಕೆ ಕರೆತಂದಿದ್ದು ಇತ್ತ ಜೆಡಿಎಸ್ನಿಂದ ಒಕ್ಕಲಿಗರ ನಾಯಕ ಎಚ್.ಡಿ ಕುಮಾರಸ್ವಮಿ ಅವರು ಕೂಡ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.