ಮೈಸೂರು, ನ.27(Daijiworld News/SS): ರಾಜ್ಯದ ಜನತೆಗೆ ಮಧ್ಯಂತರ ಚುನಾವಣೆ ಬೇಡವಾಗಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ತಾವು ಅಧಿಕ ಸೀಟುಗಳನ್ನು ಗೆಲ್ಲಲ್ಲಿದ್ದು, ಸರ್ಕಾರ ಸುಭದ್ರವಾಗಿರುತ್ತದೆ, ಹೀಗಿರುವಾಗ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಮಧ್ಯಂತರ ಚುನಾವಣೆ ಬೇಡವಾಗಿದೆ. ಆದರೆ ಅಧಿಕಾರ ಇಲ್ಲದೆ ಹತಾಶೆಯಿಂದ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಯ ಮಾತನ್ನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಇನ್ನೂ ಮೂರೂವರೆ ವರ್ಷ ವಿರೋಧ ಪಕ್ಷದ ನಾಯಕರಾಗಿಯೇ ಇರಬೇಕು. ಹೀಗಾಗಿ ಸಿದ್ದರಾಮಯ್ಯ ಅವರ ಮಧ್ಯಂತರ ಚುನಾವಣೆಯ ಆಸೆ ಈಡೇರುವುದಿಲ್ಲ ಎಂದು ಹೇಳಿದ್ದಾರೆ.
ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡುವ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಉಪ ಚುನಾವಣೆಯಲ್ಲಿ 15ಕ್ಕೆ ಹದಿನೈದೂ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ. ನಾನಿದನ್ನು ಕೇವಲ ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಎಲ್ಲವನ್ನೂ ಅಳೆದು ತೂಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.