ಚಿಕ್ಕಬಳ್ಳಾಪುರ, ನ.27(Daijiworld News/SS): ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತರೂ ಸಿಎಂ ಕುರ್ಚಿಗೆ ಅಂಟಿಕೊಂಡು ಕೂತಿದ್ದು ನೈತಿಕತೆಯೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ವಿಧಾನಸೌಧದಲ್ಲಿ ಆಡಳಿತ ನಡೆಸುವ ಬದಲು ವೆಸ್ಟ್ಎಂಡ್ ಹೋಟೆಲ್'ನಲ್ಲಿ ಅಧಿಕಾರ ನಡೆಸಿದ್ದು ಕುಮಾರಸ್ವಾಮಿ ನೈತಿಕತೆಯೆ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಾಗ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಂಡರು. ಆದರೆ ಸಿದ್ದರಾಮಯ್ಯ ಶಾಸಕಾಂಗ ನಾಯಕ ಸ್ಥಾನಕ್ಕೆ ಅಂಟಿಕೊಂಡು ಕೂಳಿತಿದ್ದು ಯಾವ ನೈತಿಕತೆ ಎಂದು ಪ್ರಶ್ನಿಸಿದರು, ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಅಳಿಯ, ಆದರೆ ಸಮ್ಮಿಶ್ರ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದಂಕಿಗೆ ತರುತ್ತೇವೆಂದು ಹೇಳಿ 28 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ನಾಯಕ ಸ್ಥಾನಕ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದು ತಿಳಿಸಿದರು.