ಮಂಡ್ಯ, ನ 27 (Daijiworld News/MB) : ಕೆ.ಆರ್. ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತೆ ಕಣ್ಣೀರಿಟ್ಟಿದ್ದಾರೆ.
"ಜಿಲ್ಲೆಯ ಜನರ ಮೇಲೆ ನಾನು ನಂಬಿಕೆಯಿಟ್ಟೆ. ನಾನು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲುವಂತೆ ಮಾಡಿದಿರಿ. ಆದರೆ ನೀವೆ ಕೈ ಬಿಟ್ಟರೆ ಹೇಗೆ? ನಾನೇನು ತಪ್ಪು ಮಾಡಿದೆ?" ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ ಹೀನಾಯ ಸೋಲನ್ನು ನೆನೆದು ನೆರೆದಿದ್ದ ಪಕ್ಷದ ಕಾರ್ಯಕರ್ತರ ಮುಂದೆ ಕಣ್ಣೀರು ಸುರಿಸಿದ್ದಾರೆ.
"ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಸ್ಥಾನವನ್ನು ನನಗೆ ಗಂಟು ಹಾಕಿದರು. ನನಗೇನೂ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುವ ಆಸಕ್ತಿ ಇರಲಿಲ್ಲ. ಜಿಲ್ಲೆಯ ಅಭಿವೃದ್ದಿಗಾಗಿ ನನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ" ಎಂದು ಹೇಳಿದರು.
ನಂತರ ಮಂಡ್ಯದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕಿಡಿಕಾರಿದ ಅವರು, "ದೇವೇಗೌಡರ ವಿರೋಧವಿದ್ದರೂ 2014 ಹಾಗೂ 2018 ರಲ್ಲಿ ನಾರಾಯಣಗೌಡನಿಗೆ ಜೆಡಿಎಸ್ ಟಿಕೆಟ್ ಕೊಟ್ಟೆ. ಆದರೆ, ಆತ ನಂಬಿಕೆಗೆ ದ್ರೋಹ ಬಗೆದಿದ್ದಾನೆ. ಬಜೆಟ್ನಲ್ಲಿ ಮಂಡ್ಯ ಜಿಲ್ಲೆಗೆ ಘೋಷಿಸಬೇಕಾದ ಕಾರ್ಯಕ್ರಮಗಳ ಕುರಿತು 2019 ಫೆಬ್ರವರಿ 18 ರಂದು ಬೆಂಗಳೂರಿನಲ್ಲಿ ಕುಳಿತು ಚಿಂತಿಸುತ್ತಿದ್ದರೆ ಈ ಪುಣ್ಯಾತ್ಮ ಬಾಂಬೆ ಆಸ್ಪತ್ರೆಯಲ್ಲಿ ಲಾಕ್ ಆಗಿದ್ದ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕ್ಷೇತ್ರದ ಅಭಿವೃದ್ದಿಗಾಗಿ ಉದಾರವಾಗಿ ದುಡ್ಡು ಕೊಡುತ್ತಿದ್ದಾರೆ. ಕುಮಾರಣ್ಣ ದುಡ್ಡು ಕೊಡುತ್ತಿರಲಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾನೆ. ದೇವರೇ ಎಲ್ಲವನ್ನು ನೋಡಿಕೊಳ್ಳಲಿ" ಎಂದು ಹೇಳಿದರು.