ಮುಂಬೈ, ನ 27 (Daijiworld News/MSP): ಮಹಾರಾಷ್ಟ್ರದಲ್ಲಿ ಎನ್ಸಿಪಿ-ಕಾಂಗ್ರೆಸ್-ಶಿವಸೇನಾ ಸೇರಿ ಸರ್ಕಾರ ರಚನೆ ಮಾಡಲು ಸಿದ್ದವಾಗುತ್ತಿರುವಂತೆಯೇ ಶಿವಸೇನಾ ಮುಖಂಡ ರಮೇಶ್ ಸೋಲಂಕಿ ತಮ್ಮ ರಾಜೀನಾಮೆ ಪತ್ರವನ್ನು ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆಗೆ ರವಾನಿಸಿದ್ದಾರೆ.
ತಮ್ಮ ರಾಜೀನಾಮೆ ತೀರ್ಮಾನವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿರುವ ರಮೇಶ್ ಸೋಲಂಕಿ ಭಾವನಾತ್ಮಕ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. " ನನ್ನ ಜೀವನ ಅತ್ಯಂತ ಕಠಿಣ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಳ್ಳುತ್ತಿದ್ದೇನೆ. ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಜನತೆಗೆ ನನ್ನ ಕೈಲಾದ ಕೆಲಸ ಮಾಡಲು ಪಕ್ಷದಲ್ಲಿ ಅವಕಾಶ ಮಾಡಿಕೊಟ್ಟಿದ್ದೀರಿ. ಅದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಹಾಗೂ ಶಿವಸೇನೆಯೂ ಸಿಎಂ ಸ್ಥಾನ ಹೊಂದುವುದು ಅತ್ಯುತ್ತಮ ನಿರ್ಧಾರ. ಆದರೆ ನನ್ನ ಕೆಲವೊಂದು ಸಿದ್ದಾಂತಗಳು ಕಾಂಗ್ರೆಸ್ನೊಂದಿಗೆ ಕೆಲಸ ಮಾಡಲು ತಡೆಯುತ್ತಿವೆ. ನಾನು ಅರೆಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಮತ್ತು ಇದು ನನ್ನ ಹುದ್ದೆಗೆ ನ್ಯಾಯಯುತವಾಗುವುದಿಲ್ಲ, ಹಾಗಾಗಿ ಪಕ್ಷವನ್ನು ಬಿಡುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಜೊತೆಗೆ ತೆಗೆಸಿಕೊಂಡಿದ್ದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಾನು 21 ವರ್ಷಗಳ ಕಾಲ ಶಿವಸೇನೆಯೊಂದಿಗೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಜೊತೆ ಕೈಜೋಡಿಸುವ ಮುನ್ನ ಪಕ್ಷದ ಎಲ್ಲಾ ಏರಿಳಿತಗಳೊಂದಿಗೆ ತಾನು ಇದ್ದೆ ಎಂದು ಹೇಳಿಕೊಂಡಿದ್ದಾರೆ.