ನವದೆಹಲಿ, ನ 27 (DaijiworldNews/SM): ಈಗಾಗಲೇ ತಿಹಾರ ಜೈಲಿನಲ್ಲಿದ್ದುಕೊಂಡು ಐಎನ್ಎಕ್ಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ಡಿ.11 ರ ತನಕ ವಿಸ್ತರಣೆಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ.
ನ.27ರ ಬುಧವಾರದಂದು ವಿಶೇಷ ನ್ಯಾಯಾಲಯ ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರು ಮೊದಲ ಬಾರಿಗೆ ಅಕ್ಟೋಬರ್ 21ರಂದು ಸಿಬಿಐನಿಂದ ಬಂಧನ ಎದುರಿಸಿದ್ದರು. ಅಕ್ಟೋಬರ್ 22 ರಂದು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ದೊರೆತಿತ್ತು. ಆದರೆ ಅಕ್ಟೋಬರ್ 22ರಂದೇ ಮತ್ತೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಚಿದಂಬರಂ ಅವರನ್ನು ವಶಕ್ಕೆ ಪಡೆದಿದೆ.
ಇದೀಗ ಚಿದಂಬರಂ ಅವರ ವಿಚಾರಣೆ ಮುಂದುವರೆಸಲಾಗಿದ್ದು, ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರಾಗಿರುವ ಇವರು ಸಾಕ್ಷಿ ನಾಶಗೊಳಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಅವರನ್ನು ಬಿಡುಗಡೆಗೊಳಿಸಲು ನ್ಯಾಯಾಲಯ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.