ಮೈಸೂರು, ನ.28(Daijiworld News/SS): ನೀವು ಎಷ್ಟು ಹಣ ಬೇಕಾದರೂ ಕೇಳಿ, ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಅನರ್ಹ ಶಾಸಕರಿಗೆ ಸೂಚಿಸಲಾಗಿದೆ. ಹೀಗಾಗಿ 15 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಅನ್ನುತ್ತಿದ್ದಾರೆ. ಇಷ್ಟೆಲ್ಲ ಇರಬೇಕಾದರೆ ನಮಗೆ ಏನು ಮಾಡಲು ಆಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದುಡ್ಡಿನಿಂದ ಉಪಚುನಾವಣೆ ನಡೆಸುತ್ತಿದ್ದು, ಎಷ್ಟು ದುಡ್ಡು ಸಾಗಿಸಿದರೂ ಕೇಳುವವರು ಇಲ್ಲ ಎಂದು ಆರೋಪಿಸಿದರು.
ಬಿಜೆಪಿಯವರ ಬಳಿ ಅಧಿಕಾರ, ಹಣ ಎರಡೂ ಇದೆ. ಪ್ರತಿ ಕ್ಷೇತ್ರಕ್ಕೂ ಉಸ್ತುವಾರಿಯನ್ನು ನೇಮಿಸಿಕೊಂಡಿದ್ದಾರೆ. ಅವರು ಫೋನ್ ಮಾಡಿ ಬೇಕಾದಷ್ಟು ಹಣ ತರಿಸಿಕೊಳ್ಳಬಹುದು. ದುಡ್ಡು ಎಲ್ಲಿಗೆ ಸಾಗಿಸಿದರೂ ತಡೆಯುವವರು ಇಲ್ಲ ಎಂದು ಕಿಡಿಕಾರಿದರು.
ದೇಶದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಶಿವಸೇನಾ– ಎನ್ಸಿಪಿ– ಕಾಂಗ್ರೆಸ್ ಸರ್ಕಾರ ಐದು ವರ್ಷ ಆಡಳಿತ ನಡೆಸಿದರೆ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದರು.