ನವದೆಹಲಿ, ನ.28(Daijiworld News/SS): ‘ದೇಶದಲ್ಲಿ ಆರ್ಥಿಕ ಹಿಂಜರಿತವಿಲ್ಲ, ಮುಂದೆಯೂ ಇರುವುದಿಲ್ಲ. ಬೇಕಿದ್ದರೆ ನಾವು ಕೈಗೊಂಡ ಪ್ರತಿಯೊಂದು ಕ್ರಮದ ಬಗ್ಗೆಯೂ ದಾಖಲೆ ಮುಂದಿಡುವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ನಿರ್ಮಲಾ ಸೀತಾರಾಮನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಅಭಿವೃದ್ಧಿ ಪ್ರಗತಿ ನಿಧಾನವಾಗಿದೆ, ಆದರೆ ದೇಶದ ಆರ್ಥಿಕತೆ ಕುಸಿತ ಕಂಡಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ನೀವು ಆರ್ಥಿಕತೆಯನ್ನು ಬೇರೆಯ ದೃಷ್ಟಿಕೋನದಲ್ಲಿ ನೋಡಿದರೆ ಬೆಳವಣಿಗೆ ನಿಧಾನಗತಿಯಲ್ಲಿದ್ದಂತೆ ಆಗುತ್ತದೆ. ಆದರೆ ಆರ್ಥಿಕ ಹಿಂಜರಿತ ಇಲ್ಲ. ಅಷ್ಟೇ ಅಲ್ಲ ಮುಂದೆಯೂ ದೇಶದಲ್ಲಿ ಆರ್ಥಿಕ ಕುಸಿತ ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2009-2014ರ ಅವಧಿಯಲ್ಲಿ 189.5 ಶತಕೋಟಿ ಡಾಲರ್ ಇದ್ದ ವಿದೇಶಿ ನೇರ ಹೂಡಿಕೆ 2019ರಲ್ಲಿ 283.9 ಶತಕೋಟಿ ಡಾಲರ್ ಆಗಿದೆ ಎಂದು ಸಚಿವೆ ವಿವರಿಸಿದರು.