ನವದೆಹಲಿ, ನ.28(Daijiworld News/SS): ಕಣಿವೆ ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ತೀರ್ಪನ್ನು ಕಾಯ್ದರಿಸಿತು.
ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಮತ್ತು ಪತ್ರಕರ್ತ ಅನುರಾಧಾ ಬಸೀನ್ ಅರ್ಜಿ ಸಲ್ಲಿಸಿದ್ದು, ಸಂವಿಧಾನದ 370ನೇ ವಿಧಿ ರದ್ದತಿ ಕಾನೂನು ಬಾಹಿರವಾಗಿದ್ದು, ಅಲ್ಲಿ ನಿರ್ಬಂಧ ಹೇರಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದಿಸಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಭಂಗವಾಗದಂತೆ ತಡೆಯಲು ಮಾತ್ರ ಅಲ್ಲಿನ ದೂರವಾಣಿ, ಮೊಬೈಲ್ ಸಂಪರ್ಕ ಮತ್ತಿತರ ಸಂಪರ್ಕವನ್ನು ಕಡಿತುಗೊಳಿಸಿ, ನಿರ್ಬಂಧ ವಿಧಿಸಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ.