ಕೊಲ್ಕತ್ತಾ, ನ 28(Daijiworld News/MB) : ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು ಜನರು ಬೆಲೆ ಕೇಳೆ ಕಣ್ಣೀರು ಹಾಕುವಂತಾಗಿದೆ. ಈರುಳ್ಳಿ ಬೆಲೆ ಏರುತ್ತಿದ್ದಂತೆ ಕಳ್ಳರು ಹಣವನ್ನು ಬಿಟ್ಟು ಈರುಳ್ಳಿಯನ್ನೇ ಕದ್ದೊಯ್ದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೂರ್ ಜಿಲ್ಲೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಒಂದು ಕಿಲೋ ಈರುಳ್ಳಿ ದರ 100 ರೂ. ಗಡಿ ದಾಟಿದ್ದು ಹಣಕ್ಕಿಂತ ಈರುಳ್ಳಿ ಬೆಲೆಯೇ ಹೆಚ್ಚು ಎಂದು ಅರಿತುಕೊಂಡ ಕಳ್ಳರು ತರಕಾರಿ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ.
ಈರುಳ್ಳಿ ಅಂಗಡಿಯನ್ನು ಹೊಂದಿರುವ ಅಕ್ಷಯ್ ಎಂಬ ವ್ಯಾಪರಿಯೊಬ್ಬರು ಬುಧವಾರ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚದುರಿಕೊಂಡಿದ್ದು ಈರುಳ್ಳಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸುಮಾರು 50 ಸಾವಿರ ಬೆಳೆಬಾಳುವ ಈರುಳ್ಳಿಯೊಂದಿಗೆ ಬೆಳ್ಳುಳ್ಳಿ ಮತ್ತು ಶುಂಠಿಯೂ ಕಳ್ಳತನವಾಗಿದೆ.
ಈ ಘಟನೆಯಲ್ಲಿ ಆಶ್ಚರ್ಯವೆಂದರೇ ನಗದು ಪಟ್ಟಿಗೆಯಲ್ಲಿ ಒಂದು ಸಾವಿರ ರೂಪಾಯಿ ಇದ್ದು ಕಳ್ಳರು ನಗದನ್ನು ಹಾಗೆಯೇ ಬಿಟ್ಟು ಬರೀ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಚೀಲಗಳನ್ನು ಹೊತ್ತೊಯ್ದಿದ್ದಾರೆ.
ಈ ಕುರಿತು ಮಾತಾನಾಡಿದ ಅಂಗಡಿಯ ಮಾಲಕ ಅಕ್ಷಯ್ ದಾಸ್ "ಈ ಬೆಲೆ ಏರಿಕೆಯಲ್ಲಿ ಕಳ್ಳರಿಗೂ ಹಣಕ್ಕಿಂತ ಈರುಳ್ಳಿಯೇ ಮೌಲ್ಯಯುತವಾಗಿದೆ" ಎಂದು ನಗುತ್ತಾ ಹೇಳಿದ್ದಾರೆ.
ಕರ್ನಾಟಕದಲ್ಲೂ ಈರುಳ್ಳಿ ದರ ಗಗನಕ್ಕೇರಿದ್ದು, ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಳ್ಳರು ಕಿತ್ತು ಕದ್ದೊಯ್ದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.
ತಮ್ಮ ಜಮೀನಿನಲ್ಲಿ ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಎಂಬವರು ಈರುಳ್ಳಿ ಬೆಳೆದಿದ್ದು ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದುಕೊಂಡಿದ್ದರು. ಆದರೆ ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ಕಳ್ಳತನವಾಗಿದೆ. ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನ ಮಾಡಿದ್ದಾರೆ.