ನವದೆಹಲಿ, ನ 28 (Daijiworld News/SB): ವಿವಾಹವಾಗಿ ಒಂದು ವರ್ಷವೂ ಕಳೆದಿರಲಿಲ್ಲ..ಅದಕ್ಕೂ ಮೊದಲೇ ವರದಕ್ಷಿಣೆಗಾಗಿ 20ರ ಹರೆಯದ ಪತ್ನಿಯನ್ನು ಪೀಡಿಸಿ ತನ್ನ ಇಬ್ಬರು ಸಹಚರರ ಸಹಾಯದಿಂದ ಕೊಲೆ ಮಾಡಿ ಆರೋಪದ ಮೇಲೆ 21 ವರ್ಷದ ಯುವಕನನ್ನು ದೆಹಲಿಯ ಪೊಲೀಸರು ಬಂಧಿಸಿದ್ದಾರೆ.
ಈ ವರ್ಷದ ಮಾರ್ಚ್ 27 ರಂದು ನ್ಯಾನ್ಸಿ ಮತ್ತು ಸಾಹಿಲ್ ಚೋಪ್ರಾ ಅವರ ವಿವಾಹವಾಗಿತ್ತು. ವರದಕ್ಷಿಣೆಗಾಗಿ ನನ್ನ ಮಗಳಿಗೆ ಅಳಿಯ ಸಾಹಿಲ್ ಚೋಪ್ರಾ ಹಿಂಸೆ ನೀಡುತ್ತಿದ್ದು ನವೆಂಬರ್ 11 ರ ಬಳಿಕ ಮಗಳು ನಾನ್ಸಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ನಾನ್ಸಿ ತಂದೆ ಪೊಲೀಸ್ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಸಾಹಿಲ್ ನ ಕಾಲ್ ಡಿಟೇಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಅನುಮಾನ ಬಂದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ನಡೆಸಿರುವುದು ಒಪ್ಪಿಕೊಂಡಿದ್ದಾನೆ.
ತನ್ನ ಸ್ನೇಹಿತರಾದ ಸುಭಾಮ್ (24) ಮತ್ತು ಬಾದಲ್ (26) ಇವರಿಬ್ಬರ ಸಹಾಯದಿಂದ ಪತ್ನಿಯನ್ನು ಹತ್ಯೆ ಮಾಡಿ ಹರಿಯಾಣದ ಪಾಣಿಪತ್ ಬಳಿ ಎಸೆಯಲಾಗಿದೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ. "ಪಾಣಿಪತ್ ಬಳಿ ಇರುವ ದಾದ್ಲಾನಾ ಗ್ರಾಮದ ರಸ್ತೆಬದಿಯ ಪೊದೆಯಿಂದ ನಾನ್ಸಿ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ದ್ವಾರಕಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.