ನವದೆಹಲಿ, ನ 28(Daijiworld News/MB) : ಭೋಪಾಲ್ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದ ಕೈ ಬಿಡಲಾಗಿದೆ.
ಅವರು ನವೆಂಬರ್ 27ರ ಬುಧವಾರವಷ್ಟೇ ಗೋಡ್ಸೆ ದೇಶ ಭಕ್ತ ಎಂಬ ಹೇಳಿಕೆಯನ್ನು ಲೋಕಸಭೆಯಲ್ಲಿ ನೀಡಿದ್ದು ವಿರೋಧ ಪಕ್ಷಗಳ ಸಂಸದರು ವಿರೋಧ ವ್ಯಕ್ತಪಡಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದ ತೆಗೆದು ಹಾಕಲಾಗಿದೆ.
ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರು ಈ ಕುರಿತು ಟ್ವೀಟ್ ಮಾಡಿ "ಟೆರರಿಸ್ಟ್ ಆಗಿರುವ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಭಾರತದ ಲೋಕಸಭೆಯ ಇತಿಹಾಸದಲ್ಲಿ ಇದೊಂದು ಕರಾಳ ದಿನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದು ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಅವರ ಹೇಳಿಕೆಯ ಕುರಿತು, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ ನಡ್ಡಾ ಕೂಡಾ "ಲೋಕಸಭೆಯಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ನೀಡಿರುವ ಹೇಳಿಕೆ ಖಂಡನಾರ್ಹ. ಇಂತಹ ಹೇಳಿಕೆಗಳು ಹಾಗೂ ಸಿದ್ಧಾಂತಗಳಿಗೆ ಬಿಜೆಪಿ ಎಂದೂ ಬೆಂಬಲ ನೀಡುವುದಿಲ್ಲ" ಎಂದು ಹೇಳಿದ್ದು ಸಾಧ್ವಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಕುರಿತು ಪಕ್ಷ ಚಿಂತನೆ ನಡೆಸಿದೆ ಎಂಬ ಮಾಹಿತಿ ದೊರೆತಿದೆ.
ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿದ್ದು ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ನಾಮನಿರ್ದೇಶನ ಮಾಡಲಾಗಿತ್ತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ 21 ಸದಸ್ಯರ ಸಂಸದೀಯ ಸಮಾಲೋಚನಾ ಸಮಿತಿಯ ನೇತೃತ್ವವನ್ನು ವಹಿಸಿದ್ದು ಈ ಸಮಿತಿಯಲ್ಲಿ ಪ್ರತಿ ಪಕ್ಷದ ಸದಸ್ಯರಾದ ಫಾರೂಕ್ ಅಬ್ದುಲ್ಲಾ ಮತ್ತು ಎನ್ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಇರಲಿದ್ದಾರೆ. ಈ ಸಮಿತಿಗೆ ಸಾಧ್ವಿ ಪ್ರಗ್ಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, "21 ಸಂಸತ್ತಿನ ಹಿರಿಯ ಸದಸ್ಯರು ಇರುವ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದ ಶಾಂತಿಯನ್ನು ಕದಡುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಸ್ಥಾನ ನೀಡಿರುವುದು ನಿಜಕ್ಕೂ ವಿಪರ್ಯಾಸ" ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
x