ಬಳ್ಳಾರಿ, ನ.28(Daijiworld News/SS): ರಾಜ್ಯದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಅನರ್ಹರನ್ನು ಸೋಲಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರನ್ನು ನಂಬಿ ನಾವು ಮೋಸ ಹೋಗಿದ್ದೇವೆ ಎಂದು ಆರೋಪಿದ ಅವರು, ಅನರ್ಹ ಶಾಸಕ ಆನಂದ್ ಸಿಂಗ್ ಅವರನ್ನು ನಂಬಿ ಕಾಂಗ್ರೆಸ್ ಮೋಸ ಹೋಗಿದೆ. ನಾನೆಲ್ಲೂ ಹೋಗಲ್ಲ ಎಂದು ನನ್ನ ಬಳಿ ಸಿಂಗ್ ಹೇಳಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಸೇರಿಕೊಂಡು ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ದೂರಿದರು.
ಇದೇ ವೇಳೆ ಬಿಎಸ್'ವೈ ಪರ ಮೃದು ಧೋರಣೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಎಂಟು ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂಬ ಸಚಿವ ಈಶ್ವರಪ್ಪ ಸವಾಲಿಗೆ, ನಾನ್ಯಾಕೆ ಸವಾಲು ಹಾಕಲಿ, ಇರುವ ವಾಸ್ತವ ಹೇಳಿದ್ದೇನೆ ಎಂದು ವ್ಯಂಗ್ಯವಾಡಿದರು.