ಮೈಸೂರು, ನ 28(Daijiworld News/MB) : ಕೆ.ಆರ್. ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟಿದಕ್ಕೆ ಕೇಂದ್ರ ಸಚಿವ ಸದಾನಂದ ಗೌಡ "ಚುನಾವಣೆ ಸಮಯ ಬಂದಾಗ ಕುಮಾರಸ್ವಾಮಿ ಅವರ ಕುಟುಂಬ ಅಳುವುದು ಸಾಮಾನ್ಯ" ಎಂದು ಹೇಳಿಕೆ ನೀಡಿದ್ದು ಆ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ "ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್" ಎಂದು ತಿರುಗೇಟು ನೀಡಿದ್ದಾರೆ.
"ನಾವು ಸದಾನಂದಗೌಡರ ರೀತಿ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತುಕೊಳ್ಳುವುದಿಲ್ಲ. ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್. ವಿಕ್ಸ್ ಅಥವಾ ಗ್ಲಿಸರಿನ್ ಹಾಕಿಕೊಂಡು ಕಣ್ಣೀರು ಹಾಕುವ ಅವಶ್ಯಕತೆ ನನಗೆ ಇಲ್ಲ. ಬಡವರ ಕಷ್ಟ ನೋಡಿದ ತಕ್ಷಣ ನನಗೆ ಕಣ್ಣೀರು ಬರುತ್ತದೆ. ನೀವು ನಾಟಕ ಆಡುವವರ ಕಡೆಯಿಂದ ಬಂದಿದ್ದೇರಿ. ನಿಮಗೆ ಮಾನವೀಯತೆ ಇದ್ದರೆ ತಾನೇ ಕಣ್ಣೀರು ಬರಲು ಸಾಧ್ಯ. ನಿಮ್ಮ ಮನೆ ಹತ್ತಿರ ಎಷ್ಟು ಜನ ಬಡವರು ಬರುತ್ತಾರೆ? ನಮ್ಮ ಮನೆ ಬಳಿ ನಿಮ್ಮ ಕೇಂದ್ರದ ಗೂಢಾಚಾರಿಗಳನ್ನು ಕಳುಹಿಸಿ ಆಗ ನಿಮಗೆ ಗೊತ್ತಾಗುತ್ತದೆ" ಎಂದು ಕಿಡಿಕಾರಿದ್ದಾರೆ.
"ನನ್ನದು ನಾಟಕದ ಕಣ್ಣೀರಲ್ಲ. ನಾನು ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ. ಹೌದು, ನಾನು ಕಣ್ಣೀರು ಹಾಕ್ತಿನಿ ಅದು ಜನರಿಗಾಗಿ ಹಾಕುವ ಕಣ್ಣೀರು. ನೀವು ಎಷ್ಟು ಪ್ರವಾಹಪೀಡಿತ ಹಳ್ಳಿಗಳಿಗೆ ಹೋಗಿದ್ದೀರಿ? ನಿಮಗೆ ಕಣ್ಣಿರು ಬರಲು ಗ್ಲಿಸರಿನ್ ವಿಕ್ಸ್ ಬೇಕು. ಹೃದಯ ಇದ್ದರೆ ತಾನೆ ಕಣ್ಣೀರು ಬರುವುದು. ಸದಾನಂದಗೌಡರನ್ನಾಗಲಿ ಬಿಜೆಪಿಯವರನ್ನಾಗಿ ಮೆಚ್ಚಿಸೋಕೆ ನಾನು ಬದುಕಿಲ್ಲ" ಎಂದು ಆಕ್ರೋಶವ್ಯಕ್ತಪಡಿಸಿದರು.
"ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿ ನನ್ನನ್ನು ಸಿಎಂ ಮಾಡಿ ಎಂದು ನಾನೇನು ಕೇಳಿರಲಿಲ್ಲ. ಅವರೇ ಅವರಿಗೆ ಬಹುಮತವಿಲ್ಲದ ಕಾರಣ ಬಂದಿದ್ದರು. ನನ್ನ ಮಗನಿಗೆ ಹೃದಯ ಚಿಕಿತ್ಸೆ ಆಗಿದೆ, ನೀವೆ ಯಾರಾದರೂ ಸಿಎಂ ಆಗಿ ಎಂದು ನನ್ನ ತಂದೆ ಹೇಳಿದರು. ಆದರೂ ಹಠ ಮಾಡಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನನ್ನನ್ನು ಮುಖ್ಯಮಂತ್ರಿ ಮಾಡಿದರು" ಎಂದು ಹೇಳಿದರು.
"ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಲು ಕಾಂಗ್ರೆಸ್ ಮುಖ್ಯಮಂತ್ರಿಯಾಗಲು ಆಫರ್ ನೀಡಿದಾಗ ನಾನು ಒಪ್ಪಿಕೊಂಡೆ. ಅದರಲ್ಲೂ ಸಾಲ ಮನ್ನಾ ಮಾಡುವ ಉದ್ಧೇಶದಿಂದ ಸಿಎಂ ಆಗಲು ಒಪ್ಪಿದೆ. ಅದಕ್ಕಾಗಿ ಸಿಎಂ ಆದ ತಕ್ಷಣ 40 ಸಾವಿರ ಕೋಟಿಯಷ್ಟು ಸಾಲಮನ್ನಾ ಮಾಡಿದೆ. ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಹಾಗಾಗಿ ಸ್ಥಿರ ಸರ್ಕಾರಕ್ಕೆ ಮತ ಹಾಕಿ" ಎಂದು ಮತದಾರರಲ್ಲಿ ಮನವಿ ಮಾಡಿದರು.