ಹುಬ್ಬಳ್ಳಿ, ನ 28(Daijiworld News/MB) : ಮದುವೆ ಆಗುವ ಹುಡುಗ ಫೋನ್ ಕರೆ ಸ್ವೀಕರಿಸಿಲಿಲ್ಲಾ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದನ್ನು ತಿಳಿದು ಯುವಕ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.
ರೇಖಾ (19) ಹಾಗೂ ವಿಷ್ಣು ಪಗಲಾಪುರ (20 ) ಆತ್ಮಹತ್ಯೆ ಶರಣಾಗಿದ್ದು, ಇವರು ಐದಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮನೆಯವರು ಇವರ ಪ್ರೀತಿಯನ್ನು ವಿರೋಧಿಸಿದ್ದರು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಹಿರಿಯರು ಎರಡು ಮನೆಯವರನ್ನು ಒಪ್ಪಿಸಿ ಐದಾರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಸಿದ್ದು ಇನ್ನೇನು ಜನವರಿಯಲ್ಲಿ ಮದುವೆ ಮಾಡಬೇಕು ಎಂದು ತಯಾರಿ ನಡೆಸಿದ್ದರು. ಆದರೆ ಈ ಯುವಪ್ರೇಮಿಗಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಸಂಜೆ ವೇಳೆ ರೇಖಾ ವಿಷ ಸೇವಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಪ್ರೇಯಸಿಯ ಸಾವಿನಿಂದ ನೊಂದ ಯುವಕ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನವೆಂಬರ್ ೨೭ರ ಬುಧವಾರ ಮುಂಜಾನೆಯಿಂದಲೇ ರೇಖಾ, ವಿಷ್ಣುವಿಗೆ ಫೋನ್ ಕರೆ ಮಾಡಿದ್ದು ವಿಷ್ಣು ಕರೆ ಸ್ವೀಕಾರ ಮಾಡಿರಲಿಲ್ಲ. ಇದರಿಂದ ಯುವತಿ ಮನನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. ಹಸೆ ಮಣೆ ಏರಬೇಕಾಗಿದ್ದ ಪ್ರೇಮಿಗಳು ಸಾವಿನ್ನಪ್ಪಿದ್ದಾರೆ.
ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.