ನವದೆಹಲಿ, ನ 28(Daijiworld News/MSP): ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂಬ ಲೋಕಸಭಾ ಸಂಸದೆ ಸಾಧ್ವಿ ಪ್ರಾಗ್ಯ ಠಾಕೂರ್ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ಸಂಸದೆ ಪ್ರಾಗ್ಯಾ ಅವರು, ಬುಧವಾರದಂದು ಲೋಕಸಭೆ ಅಧಿವೇಶನದ ವೇಳೆ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದರು. ಇದು ಅಧಿವೇಶನದಲ್ಲಿ ಭಾರೀ ಕೋಲಾಹಲವನ್ನುಂಟು ಮಾಡಿತ್ತು.
ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರು ಎಂದಿಗೂ ದೇಶದ ಮಾರ್ಗದರ್ಶಕರಾಗಿ ಉಳಿಯುತ್ತಾರೆ. ಮಹಾತ್ಮನನ್ನು ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದರು. ಈ ವೇಳೆ ಅವರ ಹೇಳಿಕೆಯಿಂದ ತೃಪ್ತರಾಗದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದರು.
ಆ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌದರಿ, ಬಿಜೆಪಿ ಮಹಾತ್ಮ ಗಾಂಧಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದ್ದು ಇದು ಠಾಕೂರ್ ಹೇಳಿಕೆಯಿಂದ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು, ಎನ್ ಸಿಪಿ ಹಾಗೂ ಎಐಎಂಐಎಂ ಪಕ್ಷಗಳು ಸ್ವಾಗತಿಸಿದವು.