ನವದೆಹಲಿ, ನ 29 (Daijiworld News/MSP): "ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾರತದಲ್ಲಿ ಸುವವಸ್ಥಿತವಾಗಿ ಇದ್ದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಮಾತನಾಡಿ, "ಮೋದಿ ಸರ್ಕಾರದ ಆಡಳಿತ ವೈಖರಿ ವಿರುದ್ದ ಕಿಡಿಕಾರಿದರು. ಸರ್ಕಾರ ಜನ ವಿರೋಧಿ ನೀತಿಯನ್ನು ತೋರುತ್ತಿದ್ದು, ದೇಶದ ಆರ್ಥಿಕತೆಯ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಾಗದಷ್ಟು ಕುಸಿದಿದ್ದರೂ ಅದರ ಚೇತರಿಕೆ ಕಡೆ ಗಮನ ನೀಡದೆ ಬಿಜೆಪಿ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ" ಎಂದು ದೂರಿದರು.
"ಕಾಂಗ್ರೆಸ್ ಪಕ್ಷವೂ ಮೋದಿ ಸರ್ಕಾರದ ಆಡಳಿತ ವೈಖರಿ ವಿರುದ್ದ, ರೈತ ವಿರೋಧಿ ನೀತಿಗಳ ವಿರುದ್ದ ದೇಶವ್ಯಾಪ್ತಿ ಹೋರಾಟ ನಡೆಸಲಿದೆ" ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.