ಆಂಧ್ರಪ್ರದೇಶ, ನ 29 (Daijiworld News/MSP): ಪತಿ ಪತ್ನಿಯ ನಡುವೆ ಕೌಟುಂಬಿಕ ಕಲಹ ನಿತ್ಯ ನಡೆಯುತ್ತಿತ್ತು ಇದರಿಂದ ನೊಂದ ಪತ್ನಿ ತನ್ನ ಬೇಸರ ಕಳೆಯಲೆಂದು ಟಿಕ್ ಟಾಕ್ ಮೊರೆ ಹೊಕ್ಕು ಒಂದಷ್ಟು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಳು. ಇದು ಗಂಡನಾಗಿದ್ದ 27 ವರ್ಷದ ನರಸಯ್ಯನಿಗೆ ತೀವ್ರ ಇರಿಸುಮುರುಸಾಗಿತ್ತು. ತನ್ನ ಪತ್ನಿಗೆ ಅಪ್ಲೋಡ್ ಮಾಡದಂತೆ ಹಲವಾರು ಬಾರಿ ಎಚ್ಚರಿಸಿದ್ದ.
ಆದರೆ ಗಂಡನಿಗೆ ಟಿಕ್ ಟಾಕ್ ವಿಡಿಯೋ ಹಾಕುವುದು ಇಷ್ಟವಿಲ್ಲ ಎಂದರಿತ ಆಕೆ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡತೊಡಗಿದಳು. ಮಾತ್ರವಲ್ಲದೇ ಹೆಚ್ಚು ತೊಂದರೆ ನೀಡಿದ್ರೆ ಡೈವೋರ್ಸ್ ನೀಡುವುದಾಗಿ ಬೆದರಿಸತೊಡಗಿದಳು. ಇದರಿಂದ ಆಕೆಯ ವಿರುದ್ದ ಸಿಟ್ಟುಗೊಂಡಿದ್ದ ನರಸಯ್ಯ ನ.17 ರಂದು ತನ್ನ ಸಹೋದರನೊಂದಿಗೆ ಸೇರಿಕೊಂಡು ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ.
ಆ ಬಳಿಕ ಪತ್ನಿಯ ಮೃತದೇಹವನ್ನು ಊರ ಹೊರಗಿದ್ದ ಸ್ಮಶಾನದಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಈ ಘಟನೆ ವಿಜಯವಾಡದಲ್ಲಿ ನಡೆದಿದ್ದು, ಘಟನೆ ಪೊಲೀಸರ ಸತತ ವಿಚಾರಣೆಯ ನಂತರ ಪ್ರಕರಣ ಹೊರಬಿದ್ದಿದೆ.