ತಿರುವನಂತಪುರಂ, ನ 29 (Daijiworld News/MSP): ಆರೋಪಿಯ ಜಾಮೀನು ರದ್ದುಗೊಳಿಸಿದ್ದಕ್ಕಾಗಿ ಇತ್ತೀಚೆಗೆ ನ್ಯಾಯಾಲಯದಲ್ಲಿ ಮಹಿಳಾ ಜಡ್ಜ್ ಗೆ ಬೆದರಿಕೆ ಹಾಕಿದ 12 ವಕೀಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು "ನ್ಯಾಯಾಂಗ ಕೆಲಸ ಕಾರ್ಯಗಳು ಎಂದಿಗೂ ಮುಕ್ತ ಮತ್ತು ನಿರ್ಭೀತ ವಾತಾವರಣವನ್ನು ಹೊಂದಿರಬೇಕು ತಕ್ಷವೇ ಈ ಪ್ರಕರಣದ ಕುರಿತು, ಹೈಕೋರ್ಟ್ ಹಸ್ತಕ್ಷೇಪ ವಹಿಸುವಂತೆ ಕೋರಿದೆ.
ಸರಕಾರಿ ಅಧಿಕಾರಿ ಕರ್ತವ್ಯ ನಿರ್ವಹಿಸದಂತೆ ತಡೆ , ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್ ಸೇರಿದಂತೆ ವಿವಿಧ ಆರೋಪಗಳ ಮೇಲೆ ತಿರುವನಂತಪುರ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸೇರಿದಂತೆ 12 ವಕೀಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಕೀಲರ "ಅಶಿಸ್ತಿನ" ನಡವಳಿಕೆಯ ಬಗ್ಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೀಪಾ ಮೋಹನ್ ಮುಖ್ಯ ಮ್ಯಾಜಿಸ್ಟ್ರೇಟ್ ಗೆ ಲಿಖಿತ ದೂರು ಸಲ್ಲಿಸಿ ಅದನ್ನು ಪೊಲೀಸರಿಗೆ ಕಳುಹಿಸಿದ ನಂತರ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆದರೆ, ತಿರುವನಂತಪುರಂ ಬಾರ್ ಅಸೋಸಿಯೇಷನ್ ಆರೋಪವನ್ನು ತಳ್ಳಿ ಹಾಕಿದ್ದು, ಕೆಲವು ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲೆಂದು ಒಂದಷ್ಟು ಸದಸ್ಯರು ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಲು ಹೋಗಿದ್ದರು ಅಷ್ಟೇ ನಾವು ಅವರ ಕೋಣೆಗೆ ಬೀಗ ಹಾಕಿಲ್ಲ ಅಥವಾ ಅವರು ಆಪಾದನೆ ಮಾಡಿರುವಂತೆ ಬೆದರಿಕೆ ಹಾಕಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಈ ಘಟನೆ ಕುರಿತು ನ್ಯಾಯಾಂಗ ಅಧಿಕಾರಿಗಳ ಸಂಘ ಕೇರಳ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮುಂದೆ ದೂರು ದಾಖಲಿಸಿದೆ. ತಿರುವನಂತಪುರಂ ಬಾರ್ ಅಸೋಸಿಯೇಷನ್ನ ಕೆಲವು ಸದಸ್ಯರು ಮ್ಯಾಜಿಸ್ಟ್ರೇಟ್ ಅವರನ್ನು "ಅವಮಾನಿಸಿದ್ದಾರೆ" ಎಂದು ಹೇಳಿದ್ದು ಕ್ರಿಮಿನಲ್ ಬೆದರಿಕೆ ಯಿಂದ ಕರ್ತವ್ಯವನ್ನು ನಿರ್ವಹಿಸಲು ಅಡಚಣೆಯಾಗಿದೆ ಎಂದು ದೂರಿದ್ದಾರೆ.
ತಿರುವನಂತಪುರಂ ಬಾರ್ ಅಸೋಸಿಯೇಷನ್ ತನ್ನ ಸದಸ್ಯರ ವಿರುದ್ಧದ ದೂರನ್ನು ವಿರೋಧಿಸಿ ಶುಕ್ರವಾರ ಜಿಲ್ಲೆಯಾದ್ಯಂತ ನ್ಯಾಯಾಲಯಗಳನ್ನು ಬಹಿಷ್ಕರಿಸುತ್ತಿದೆ. ಬಹಿಷ್ಕಾರದ ಪರಿಣಾಮ ತಿರುವನಂತಪುರಂ ಜಿಲ್ಲೆಯ ಸುಮಾರು 50 ನ್ಯಾಯಾಲಯಗಳ ಕಾರ್ಯಚಟುವಟಿಕೆಗೆ ತೊಂದರೆಯಾಗಿದೆ.