ನವದೆಹಲಿ, ನ.30(Daijiworld News/SS): ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ಅಳವಡಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 15ರವರೆಗೆ ಮುಂದೂಡಿದೆ.
ಈ ಹಿಂದೆ ಡಿಸೆಂಬರ್ 1ರಿಂದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಈಗ ಮತ್ತೆ 15 ದಿನ ಕಾಲವಾಕಾಶ ನೀಡಲಾಗಿದ್ದು, ಒಂದು ವೇಳೆ ಡಿಸೆಂಬರ್ 15ರ ನಂತರವೂ ಫ್ಯಾಸ್ಟ್ ಟ್ಯಾಗ್ ಅಳವಡಿಸದ ವಾಹನಗಳಿಗೆ ಡಬಲ್ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಲವು ಟೋಲ್ ಗಳಲ್ಲಿ ಸಾಕಷ್ಟು ಫಾಸ್ಟ್ಟ್ಯಾಗ್'ಗಳು ಇರದೇ ಇದ್ದ ಕಾರಣ ಜನರಿಗೆ ಕೊಂಡುಕೊಳ್ಳಲಾಗುತ್ತಿಲ್ಲ. ಈ ಕಾರಣವನ್ನು ಮನಗಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಮುಂದೂಡಿದೆ.
ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಲು ನಾಗರಿಕರಿಗೆ ಸೂಕ್ತ ಸಮಯಾವಕಾಶ ನೀಡಬೇಕಾಗುತ್ತದೆ. ಹೀಗಾಗಿ ಡಿಸೆಂಬರ್ 1ರ ಗಡುವನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.