ನವದೆಹಲಿ, ಅ.22 (DaijiworldNews/AK): ಸತತ ಚುನಾವಣಾ ಸೋಲುಗಳನ್ನು ಮುಚ್ಚಿಹಾಕಲು ಮತ್ತು ನುಸುಳುಕೋರರ ವೋಟ್ಬ್ಯಾಂಕ್ ಅನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ವೋಟ್ ಚೋರಿಯಂತಹ ಹುಸಿ ನೆಪಗಳನ್ನು ಹುಡುಕುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಚುನಾವಣಾ ಆಯೋಗ ಮತ್ತು ಬಿಜೆಪಿಯ ನಡುವೆ ಒಳಒಪ್ಪಂದವಿದೆ ಹಾಗೂ ಮತಗಳ ಕಳ್ಳತನ ನಡೆಯುತ್ತಿದೆ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ( ಅವರ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿರುಗೇಟು ನೀಡಿದರು.
ತಮ್ಮ ಜನ್ಮದಿನದ ಅಂಗವಾಗಿ ನವದೆಹಲಿಯ ದ್ವಾರಕಾದಲ್ಲಿ ಯಮುನಾ ನದಿ ಸ್ವಚ್ಛತೆ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ 8,941 ಕೋಟಿ ರೂ. ಮೌಲ್ಯದ 43 ದೆಹಲಿ ಜಲ ಮಂಡಳಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗೆ ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಬಿಜೆಪಿ ಸತತವಾಗಿ ಚುನಾವಣೆಗಳನ್ನು ಗೆಲ್ಲುತ್ತಿರುವುದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಅದಕ್ಕಾಗಿಯೇ ಅವರು ವೋಟ್ ಚೋರಿ ಎಂಬ ಹೊಸ ನೆಪವನ್ನು ಮುನ್ನೆಲೆಗೆ ತಂದಿದ್ದಾರೆ. ರಾಹುಲ್ ಅವರೇ, ನೀವು ಮತಗಳ್ಳತನದ ಬಗ್ಗೆ ಮಾತನಾಡುತ್ತಿರುವುದು ನುಸುಳುಕೋರರ ಮತಗಳನ್ನು ರಕ್ಷಿಸುವ ಉದ್ದೇಶದಿಂದ ಮಾತ್ರ ಎಂದು ನೇರವಾಗಿ ಆರೋಪಿಸಿದರು.