ಇಟಾನಗರ, ಅ.23 (DaijiworldNews/AA): ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಸಮೀಪ ಭಾರತ ಮತ್ತು ಚೀನಾ ಯೋಧರ ನಡುವೆ ಹಲವು ಸೂಕ್ಷ್ಮ ಸ್ಥಳಗಳಲ್ಲಿ ಸಂಘರ್ಷ ನಡೆದಿದ್ದು, ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿದುಬಂದಿದೆ.

ಐಟಿಬಿಪಿ ಸಿಬ್ಬಂದಿಗೆ ಆಯೋಜಿಸಲಾಗಿದ್ದ ವಾರ್ಷಿಕ ಗೌರವ ಸಮಾರಂಭದಲ್ಲಿ ಮಾತನಾಡಿದ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಮಹಾನಿರ್ದೇಶಕ ಶತ್ರುಜೀತ್ ಕಪೂರ್, "ಕಳೆದ ಕೆಲವು ದಿನಗಳಿಂದ ಅರುಣಾಚಲ ಪ್ರದೇಶದ ಹಲವು ಗಡಿ ಪ್ರದೇಶಗಳಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಮುಖಾಮುಖಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಲೂ ಅದೇ ಸ್ಥಿತಿ ಮುಂದುವರೆದಿದೆ" ಎಂದು ತಿಳಿಸಿದ್ದಾರೆ.
"ಜುಲೈ ತಿಂಗಳಿನಿಂದಲೇ ಅರುಣಾಚಲ ಗಡಿಯ ಹಲವು ಆಯಕಟ್ಟಿನ ಸ್ಥಳಗಳಲ್ಲಿ ಉದ್ವಿಗ್ನತೆ ಮಡುಗಟ್ಟಿದೆ. ಮುಖ್ಯವಾಗಿ ಆಸಾಫಿಲಾ ಸೆಕ್ಟರ್ನಲ್ಲಿ ಭಾರತದ ವಾಸ್ತವಿಕ ನಿಯಂತ್ರಣ ರೇಖೆಯಿಂದ ಕೇವಲ 6 ರಿಂದ 7 ಕಿಲೋಮೀಟರ್ ದೂರದಲ್ಲೇ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಸೇನೆಯು ಟೆಂಟ್ಗಳನ್ನು ನಿರ್ಮಿಸಿಕೊಂಡು ಠಿಕಾಣಿ ಹೂಡಿದೆ. ಚೀನಾದ ಈ ಪ್ರಚೋದನಕಾರಿ ನಡೆಯನ್ನು ತಡೆಯಲು ಐಟಿಬಿಪಿಯ ವಿಶೇಷ ತರಬೇತಿ ಪಡೆದ 'ಶೌರ್ಯ ಕಮಾಂಡೋ' ಪ್ಲಟೂನ್ಗಳು ತಕ್ಷಣವೇ ರಂಗಕ್ಕಿಳಿದಿದ್ದು, ಎದುರಾಳಿ ಸೈನಿಕರ ಮುನ್ನಡೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ" ಎಂದು ಮಾಹಿತಿ ನೀಡಿದರು.