ನವದೆಹಲಿ, ಅ.23 (DaijiworldNews/AA): ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಆಂತರಿಕ ವಿಷಯಗಳ ಕುರಿತು ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ನೈತಿಕ ಅಧಿಕಾರವಿಲ್ಲ. 1999ರ ಕಾರ್ಗಿಲ್ ಯುದ್ಧದ ವೇಳೆ ಮೃತಪಟ್ಟ ತಮ್ಮ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿತ್ತು ಎಂದು ಭಾರತವು ವಿಶ್ವಸಂಸ್ಥೆ ಮುಂದೆ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದೆ.

ವಿಶೇಷ ಸಂದರ್ಭಗಳಲ್ಲಿ ಅಂತ್ಯಕ್ರಿಯೆಯ ಹಕ್ಕುಗಳಿಗೆ ಸಂಬಂಧಿಸಿದಂತೆ, 'ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯ' ಕುರಿತ ವಿಶೇಷ ವರದಿಗಾರರೊಂದಿಗೆ ಸಂವಾದ ನಡೆಯಿತು. ಈ ವೇಳೆ ಮಾತನಾಡಿದ ಭಾರತದ ಇತರ ಹಿರಿಯ ರಾಜತಾಂತ್ರಿಕರೊಂದಿಗೆ ಭಾಗವಹಿಸಿದ್ದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್, 1999ರ ಕಾರ್ಗಿಲ್ ಯುದ್ಧದ ವೇಳೆ ಮೃತಪಟ್ಟ ತಮ್ಮ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿತ್ತು ಎಂದು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಸ್ಪಷ್ಟನೆ ನೀಡಿದ್ದಾರೆ.
"ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ. ಅವರ ಮೂಲಭೂತ ಹಕ್ಕುಗಳನ್ನು ನಿರಂತರವಾಗಿ ದಮನಿಸಲಾಗುತ್ತಿದೆ. ತನ್ನ ದೇಶದ ಅಲ್ಪಸಂಖ್ಯಾತರ ಸುರಕ್ಷತೆಯನ್ನೇ ಖಚಿತಪಡಿಸಿಕೊಳ್ಳಲು ಯೋಗ್ಯತೆಯಿಲ್ಲದ ರಾಷ್ಟ್ರವೊಂದು, ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡುವ ಯಾವುದೇ ಹಕ್ಕನ್ನು ಹೊಂದಿಲ್ಲ" ಎಂದು ಕಿಡಿಕಾರಿದರು.
"1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ತನ್ನದೇ ಸೇನೆಯ ಯೋಧರ ಮೃತದೇಹಗಳನ್ನು ಸ್ವೀಕರಿಸಲು ಹಿಂದೇಟು ಹಾಕಿ ನಿರಾಕರಿಸಿದ ನಾಚಿಕೆಗೇಡಿನ ಇತಿಹಾಸ ಪಾಕಿಸ್ತಾನಕ್ಕಿದೆ. ಅಂದು ಆ ಮೃತ ಸೈನಿಕರಿಗೆ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದು ಭಾರತೀಯ ಸೇನೆ. ತನ್ನ ಸೈನಿಕರನ್ನೇ ಧಿಕ್ಕರಿಸಿದ ದೇಶ ಇಂದು ಸಮಾಧಿ, ಧರ್ಮ ಮತ್ತು ನಂಬಿಕೆಯ ಬಗ್ಗೆ ನಾಚಿಕೆಯಿಲ್ಲದೆ ಮಾತನಾಡುತ್ತಿರುವುದು ದೊಡ್ಡ ವಿಪರ್ಯಾಸ" ಎಂದು ಗುಡುಗಿದರು.
"ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಡ್ ಉಗ್ರರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಒಬ್ಬ ಭಯೋತ್ಪಾದಕ ಕೇವಲ ಅಮಾಯಕರನ್ನು ಕೊಲ್ಲುವುದು ಮಾತ್ರವಲ್ಲ, ಇಡೀ ರಾಷ್ಟ್ರದ ಶಾಂತಿ ಮತ್ತು ಸ್ವಾಸ್ಥ್ಯವನ್ನು ಹಾಳುಮಾಡುತ್ತಾನೆ. ಮಾನವನ ಅತ್ಯಂತ ಪವಿತ್ರವಾದ 'ಬದುಕುವ ಹಕ್ಕನ್ನು' ಕಸಿದುಕೊಳ್ಳುವ ಭಯೋತ್ಪಾದಕರ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಕಾಲತ್ತು ವಹಿಸುವವರಿಗೆ, ಆ ಭಯೋತ್ಪಾದನೆಯಿಂದ ಬಲಿಯಾದ ಮುಗ್ಧ ಜನರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ದುರಂತ" ಎಂದು ತಿಳಿಸಿದರು.
"ಭಾರತದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರದ ಬಗ್ಗೆ ಮಾತನಾಡುವುದನ್ನು ಬಿಟ್ಟು, ರಾವಲಕೋಟ್ ಸೇರಿದಂತೆ ತನ್ನ ಅಕ್ರಮ ಆಕ್ರಮಣದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರ ಅಭಿವೃದ್ಧಿ ಮತ್ತು ಅಲ್ಲಿನ ದುಸ್ಥಿತಿಯ ಕಡೆಗೆ ಪಾಕಿಸ್ತಾನ ಗಮನಹರಿಸಲಿ" ಎಂದರು.