ನವದೆಹಲಿ, ಅ.23 (DaijiworldNews/AA): ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಕಾಂಗ್ರೆಸ್ ಯತ್ನಿಸುತ್ತಿದೆ, ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುತ್ತಿದೆ, ಇತರ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಗುರುವಾರ ದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಶೃಂಗಸಭೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿದ ಮೋದಿ, "ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ, ಕೆಲವರು ಭಾರತದಲ್ಲಿ ಅರಾಜಕತೆಯ ಕನಸು ಕಾಣುತ್ತಿದ್ದಾರೆ. ವಿದೇಶಗಳಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವ ಮೂಲಕ ವಿರೋಧ ಪಕ್ಷದ ನಾಯಕರು ಭಾರತದ ಪ್ರತಿಷ್ಠೆಗೆ ಹಾನಿ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಅರಾಜಕತೆ ತಲೆದೋರಿರುವ ಈ ಸಂದರ್ಭದಲ್ಲಿ, ಬಲಿಷ್ಠ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ವ್ಯಕ್ತಿಗಳು ಭಾರತದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲು ಪಣತೊಟ್ಟಿರುವಂತೆ ಕಾಣುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಗಳಿಗೆ ಹೋಗಿ ಭಾರತಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ಅಲ್ಲದೆ, ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತೆ ವಿದೇಶಿಯರನ್ನು ಬೇಡಿಕೊಳ್ಳುತ್ತಾರೆ" ಎಂದು ಪರೋಕ್ಷವಾಗಿ ಟೀಕಿಸಿದರು.
"ಒಂದು ವರ್ಷದಲ್ಲಿ ನಮ್ಮ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ನಡೆಯುವ ಉಡಾವಣೆಗಳ ಸಂಖ್ಯೆಗಿಂತ, ತನ್ನ ನಾಯಕನನ್ನು ಮುಂಚೂಣಿಗೆ ತರಲು ಕಾಂಗ್ರೆಸ್ ನಡೆಸುವ ವಿಫಲ ಪ್ರಯತ್ನಗಳ ಸಂಖ್ಯೆಯೇ ಹೆಚ್ಚಾಗಿದೆ" ಎಂದು ವ್ಯಂಗ್ಯವಾಡಿದರು.
"ಪದೇಪದೇ ಎದುರಾಗುತ್ತಿರುವ ವೈಫಲ್ಯಗಳ ಕಳಂಕದಿಂದ ತನ್ನ ಕುಟುಂಬವನ್ನು ರಕ್ಷಿಸಲು ಕಾಂಗ್ರೆಸ್ ಮಾಡುತ್ತಿರುವ ಕೆಲಸ ಭಾರತದ ಸಾಧನೆಗಳನ್ನು ಪ್ರಶ್ನಿಸುತ್ತಿರುವುದು. ಆದರೆ, ಕಾಂಗ್ರೆಸ್ ತನ್ನದೇ ಪತನಕ್ಕೆ ದಾರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನಿರಂತರ ವೈಫಲ್ಯಗಳ ಕಳಂಕದಿಂದ ತಮ್ಮ ಕುಟುಂಬವನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ಕಾಂಗ್ರೆಸ್ ಈಗ ಭಾರತದ ಸಾಧನೆಗಳು, ಗುಣವೈಶಿಷ್ಟ್ಯಗಳು ಮತ್ತು ಪ್ರಗತಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದೆ" ಎಂದರು.
"ದ್ರಾಕ್ಷಿ ಹಣ್ಣು ಅತಿಯಾಗಿ ಹುಳಿಯಾಗಿರುವುದರಿಂದ, ಕಾಂಗ್ರೆಸ್ ಈಗ ಆ ಹಣ್ಣುಗಳನ್ನು ನೀಡುವ ಬಳ್ಳಿಯನ್ನೇ ಕತ್ತರಿಸಲು ಮುಂದಾಗಿದೆ. ಗಾಂಧಿ ಕುಟುಂಬವು ಕಾಂಗ್ರೆಸ್ಗೆ ಹೊರೆಯಾಗಿ ಪರಿಣಮಿಸಿದೆ. ಪಕ್ಷದ ಹಿರಿಯ ನಾಯಕರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಒಪ್ಪಿಕೊಂಡರೂ ಬಹಿರಂಗವಾಗಿ ಮಾತನಾಡಲು ಮೌನ ವಹಿಸುತ್ತಿದ್ದಾರೆ" ಅಭಿಪ್ರಾಯ ವ್ಯಕ್ತಪಡಿಸಿದರು.
"ವಾಸ್ತವವಾಗಿ, ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ. ಪಕ್ಷದ ಹಿರಿಯ ನಾಯಕರಿಗೂ ಈ ಸಂಗತಿ ತಿಳಿದಿದೆ. ನಾವು ಖಾಸಗಿಯಾಗಿ ಭೇಟಿಯಾದಾಗ ಅವರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೂ, ಅವಮಾನದ ಕಹಿಯನ್ನು ನುಂಗುತ್ತಾ ಮೌನವಾಗಿರಲು ಅವರು ನಿರ್ಧರಿಸಿದ್ದಾರೆ" ಎಂದು ಅಭಿಪ್ರಾಯಪಟ್ಟರು.