ಮುಂಬೈ, ನ 30 (Daijiworld News/MB) : ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಬಹುಮತ ಸಾಬೀತುಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದಿದ್ದಾರೆ.
288 ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಬೆಂಬಲದ ಅಗತ್ಯವಿದ್ದು ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ 169 ಶಾಸಕರ ಮತ ಲಭಿಸಿದೆ. ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ 154 ಹೊರತು ಪಡಿಸಿ ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದ್ದು ಮೊದಲು ವಿಶ್ವಾಸಮತದ ಪರ ಇರುವ ಶಾಸಕರ ತಲೆ ಎಣಿಕೆ ಮಾಡಲಾಯಿತು.
ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ 105 ಬಿಜೆಪಿ ಶಾಸಕರು ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲೇ ಕಲಾಪದಿಂದ ಹೊರನಡೆದಿದ್ದಾರೆ.
ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ನ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿಯು ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ಆರಂಭವಾಗುವ ಮೊದಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗದ್ದಲ ನಡೆಸದಂತೆ ಪ್ರೋ ಟೆಮ್ ಸ್ಪೀಕರ್ ದಿಲೀಪ್ ಪಾಟೀಲ್ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಫಡ್ನವೀಸ್, "ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಿಯಮಾವಳಿ ಪ್ರಕಾರ ಕರೆದಿಲ್ಲ. ಸಮರ್ಪಕವಾಗಿ ಪ್ರಮಾಣವಚನವನ್ನೂ ತೆಗೆದುಕೊಂಡಿಲ್ಲ. ವಂದೇ ಮಾತರಂ ಹಾಡುವುದರ ಮುಖಾಂತರ ಅಧಿವೇಶನ ಆರಂಭವಾಗಬೇಕಿದ್ದು ನಿಯಮಗಳನ್ನು ಉಲ್ಲಂಘಿಸಿ ಅಧಿವೇಶನ ಕರೆಯಲಾಗಿದೆ" ಆರೋಪ ವ್ಯಕ್ತ ಪಡಿಸಿದರು.
ನಮಗೆ ರಾತ್ರಿ ಒಂದು ಗಂಟೆಗೆ ವಿಶೇಷ ಅಧಿವೇಶನ ನಡೆಯಲಿರುವ ಕುರಿತು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಲು ಮುಂದಾದಾಗ ಹಂಗಾಮಿ ಸ್ಪೀಕರ್ ಪಾಟೀಲ್ ಅವರು ಫಡ್ನವೀಸ್ ಅವರ ಮನವೊಲಿಸಿ ಕುಳಿತುಕೊಳ್ಳಲು ಹೇಳಿದ್ದರು.