ಬೆಂಗಳೂರು, ಅ.23 (DaijiworldNews/AK): ಅಸ್ಪೃಶ್ಯತೆ ಆಚರಣೆ ಕಾಂಗ್ರೆಸ್ ಸರ್ಕಾರದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಮೈಸೂರು ದಸರಾ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ ಹಾಗೂ ಬಸವಂತಪ್ಪ ಅವರಿಗೆ ಮಾಡಿದ ಅವಮಾನವೇ ಉದಾಹರಣೆ ಎಂದು ಸಂಸದ ಮತ್ತು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಬಂದರೆ ಪೂಜಾಸ್ಥಳ ಅಪವಿತ್ರ ಆಗಲಿದೆ ಎಂದು ಹೀಗೆ ಮಾಡಲಾಗಿದೆ, ಸಚಿವರಿಗೆ ಒಳಗೆ ಬಿಡದೆ ಅವಮಾನ ಮಾಡಿರುವುದು ಶಿಷ್ಟಚಾರ ಉಲ್ಲಂಘನೆ ಅಲ್ಲ, ಬದಲಿಗೆ ಅದು ಅಸ್ಪೃಶ್ಯತೆ ಆಚರಣೆ ಎಂದು ಟೀಕಿಸಿದರು.
ಕಾಂಗ್ರೆಸ್ನಲ್ಲಿ ಇಂತಹುದು ನಡೆದರೂ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮನುವಾದಿ ಎಂದು ದೂರುತ್ತಾರೆ. ಹಾಗಾದರೆ ಕಾಂಗ್ರೆಸ್ ಜಾತ್ಯತೀತವಾದಿಯೇ ಅಥವಾ ಕೋಮುವಾದಿಯೇ ಎಂಬುದನ್ನು ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಖರ್ಗೆ ಅವರು ಹೇಳಲಿ ಎಂದು ಒತ್ತಾಯಿಸಿದರು.
ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ನವರು ಸುಳ್ಳು ಹೇಳುತ್ತಾ ಬಂದರು. ಆದರೆ ಅಸಲಿ ಸತ್ಯ ಎಂದರೆ ಸಂವಿಧಾನ ಬದಲಿಸುತ್ತಾ ಬಂದವರು ಕಾಂಗ್ರೆಸ್ನವರು. ತಮ್ಮ ಸ್ವಾರ್ಥಕ್ಕಾಗಿ ಹಲವು ತಿದ್ದುಪಡಿ ತಂದರು. ಅವೆಲ್ಲ ದೇಶದ ಜನ ಮತ್ತು ದಲಿತರಿಗಾಗಿ ಅಲ್ಲವೇ ಅಲ್ಲ. ವಾಜಪೇಯಿ ಅವರೊಬ್ಬರೇ ದಲಿತರಿಗಾಗಿ ಸಂವಿಧಾನ ಬದಲು ಮಾಡಿದರು. ದಲಿತರಿಗೆ ಮೀಸಲಾತಿ ನೀಡಿದವರು ವಾಜಪೇಯಿ ಎಂದು ವಿವರಿಸಿದರು.
ಆರ್.ಎಸ್.ಎಸ್ ಮನುವಾದಿ ಮತ್ತು ಬಿಜೆಪಿ ದಲಿತ ವಿರೋಧಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಭಯಂಕರ ಮಾತನಾಡುತ್ತಾರೆ. ಆದರೆ ಇಂದು ದಲಿತ ಸಚಿವರಿಗೆ ಅವಮಾನ ಆದರೂ ಅವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅವರೀಗ ಕಾಂಗ್ರೆಸ್ ಜಾತ್ಯತೀತವಾದಿಯೇ ಅಥವಾ ಕೋಮುವಾದಿಯೇ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಪೌರ ಕಾರ್ಮಿಕರ ಮಗ ಬಸವಂತಪ್ಪ ಅವರನ್ನು ಸಚಿವರನ್ನಾಗಿ ಮಾಡಿದೆವು ಎಂದು ಡಿ.ಕೆ.ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಅವರು ಬೆನ್ನು ತಟ್ಟಿಕೊಂಡರು. ಆದರೆ ಈಗ ಪೌರ ಕಾರ್ಮಿಕನ ಮಗನನ್ನು ಪೌರ ಕಾರ್ಮಿಕನ ರೀತಿಯೇ ನಡೆಸಿಕೊಳ್ಳುತ್ತಿದ್ದಾರೆ. ಶಿವರಾಜ್ ತಂಗಡಗಿ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು. ಅವರಿಗೆ ದಸರಾದಲ್ಲಿ ಗೌರವ ಸಿಗಬೇಕಿತ್ತು. ನಾನೂ ಆ ಇಲಾಖೆ ಸಚಿವನಾಗಿ ದಸರಾ ಆಚರಿಸಿದ್ದೇನೆ ಎಂದು ಹೇಳಿದರು.