ಬೆಂಗಳೂರು, ನ 30(Daijiworld News/MSP): ಹಳೆಯದನ್ನೆಲ್ಲಾ ಮರೆತುಬಿಡಿ , ಯಾಕೋ ಗೊತ್ತಿಲ್ಲ ತಪ್ಪು ಮಾಡಿದ್ರೆ ತಡ್ಕೊಳ್ಳಕ್ಕೆ ಆಗಲ್ಲ, ನನಗೆ ಬೇಗ ಕೋಪ ಬರುತ್ತೆ. ಆದರೆ ಇನ್ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜೊತೆಯೂ ಗಲಾಟೆ ಮಾಡಿಕೊಳ್ಳಲ್ಲ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.
ಈ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು " ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಗಲಾಟೆಗಳ ನಂತರ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹೆದರುತ್ತಿದ್ದಾರೆ. ಅವರೆಲ್ಲಾ ನಾನು ಹೊಡೆಯುತ್ತೇನೆ ಎಂದು ಅಂದುಕೊಂಡಿದ್ದಾರೆ. ನನಗೆ ಯಾರ ಮೇಲೆಯೂ ಕೋಪವಿಲ್ಲ" ಎಂದಿದ್ದಾರೆ.
"ಎಲ್ಲ ಘಟನೆಗಳು ಆಕಸ್ಮಿಕ. ಹಳೆಯ ಹುಚ್ಚ ವೆಂಕಟ್ ನನ್ನು ಮರೆತು ಬಿಡಿ , ನಾನು ಬದಲಾಗಿದ್ದೇನೆ. ಬಿಗ್ಬಾಸ್ ಮನೆಗೆ ಪ್ರವೇಶ ಸಿಕ್ಕರೆ ಖಂಡಿತಾ ಹೋಗುವೆ ಗಲಾಟೆ ಖಂಡಿತಾ ಮಾಡಲ್ಲ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದರೂ ಸಾಕು. ಅಲ್ಲಿರುವ ಸ್ಪರ್ಧಿಗಳಿಗೆಲ್ಲ ಶುಭಾಶಯ ಕೋರುತ್ತೇನೆ" ಎಂದರು.
"ಸಿನಿಮಾಗಳಲ್ಲಿ ಅವಕಾಶ ಅಥವಾ ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಬಂದು ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್ ನನ್ನು ಮರೆತು ಬಿಡಿ. ನಾನು ಬದಲಾಗಿದ್ದೇನೆ. ಸಿನಿಮಾ ನಿರ್ಮಾಣ ಮಾಡೋದಕ್ಕೆ ಅಪ್ಪ ದುಡ್ಡು ಕೊಡುವ ಭರವಸೆ ನೀಡಿ ಬಳಿಕ ಕೊಡಲಿಲ್ಲ. ಅದೇ ಕಾರಣಕ್ಕೆ ಕಾರ್ ಗ್ಲಾಸ್ ನನ್ನು ಒಡೆದಿದ್ದೇನೆ ನಾನು ಮಾನಸಿಕ ಮತ್ತು ದೈಹಿಕವಾಗಿಯೂ ಸ್ವಸ್ಥನಾಗಿದ್ದೇನೆ" ಎಂದು ಇದೇ ವೇಳೆ ತಿಳಿಸಿದರು.