ಬೋಪಾಲ್, ನ 30(Daijiworld News/MSP): ಮಧ್ಯಪ್ರದೇಶದ ಚತ್ತಾರ್ಪುರ ಜಿಲ್ಲೆಯ ಪೊಲೀಸರು ಕೊಲೆ ಆರೋಪಿಗಳನ್ನು ಹಿಡಿಯಲು ವಿಶೇಷ ತಂತ್ರವನ್ನು ಬಳಸಿ ಖೆಡ್ಡಾಕ್ಕೆ ಕೆಡವಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರು ವಧುವಿನಂತೆ ಪೋಸ್ ನೀಡುವ ಫೋಟೋವನ್ನು ಆರೋಪಿಗೆ ಕಳುಹಿಸಿ ವಿವಾಹದ ಪ್ರಸ್ತಾಪವೊಡ್ಡಿ ಜೈಲಿಗಟ್ಟಿದ್ದಾರೆ.
ಉತ್ತರಪ್ರದೇಶದ ಮಹೂಬಾ ಜಿಲ್ಲೆಯ ಬಿಜೌರಿ ಗ್ರಾಮದ ನಿವಾಸಿಯಾಗಿದ್ದ ಬಾಲಕಿಶನ್ ಚೌಬೆ ಕೊಲೆ ಪ್ರಕರಣ ಸೇರಿ ವಿವಿಧ 16 ಕ್ರಿಮಿನಲ್ ಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ. ಈ ವರ್ಷದ ಆಗಸ್ಟ್ನಲ್ಲಿ ಮಧ್ಯಪ್ರದೇಶದ ನೌಗಾನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ, ಆತನನ್ನು ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನವನ್ನು ಘೋಷಿಸಿದ್ದರು. ಆತನನ್ನು ಬಂಧಿಸುವ ಪೊಲೀಸರು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿತ್ತು.
ಇದೇ ವೇಳೆ ಆರೋಪಿ ಚೌಬೆ ಮದುವೆಗೆ ಹೆಣ್ಣು ಹುಡುಕುತ್ತಿರುವ ವಿಚಾರವನ್ನು ತಿಳಿದ ಪೊಲೀಸರು, ಬಲೆಗೆ ಕೆಡವಲು ಉಪಾಯ ಹುಡುಕಿದ್ದಾರೆ. ಮಾತ್ರವಲ್ಲದೇ ನವದೆಹಲಿಯಲ್ಲಿ ವಾಸಿಸುತ್ತಿರುವ ಬುಂದೆಲ್ಖಂಡದ ಮಹಿಳಾ ಕಾರ್ಮಿಕರ ಹೆಸರಿನಲ್ಲಿ ಸಿಮ್ ಕಾರ್ಡ್ ಹೊಂದಿಸಿ ಆದೇ ಹೆಸರಿನಲ್ಲಿ ಮಹಿಳಾ ಸಬ್ಇನ್ಸ್ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಚೌಬೆಗೆ ಕರೆ ಮಾಡಿದ್ದಾರೆ. ಬಳಿಕ ತಪ್ಪಾಗಿ ನಂಬರ್ ನಮೂದಿಸಿ ಕರೆ ಬಂದಿರಬಹುದು ಎಂದು ಮಾತನಾಡಿದ್ದಾರೆ.
ಆ ನಂತರ ಇವರಿಬ್ಬರು ಕರೆ ಮಾಡಿ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ನಡುವೆ ಚೌಬೆ ಮಹಿಳೆಯ ಪೂರ್ವಾಪರವನ್ನು ವಿಚಾರಿಸಿ ಮೊಬೈಲ್ ಸಂಖ್ಯೆಯ ಅಸಲಿತನವನ್ನು ಪರಿಶೀಲಿಸಿದ್ದಾನೆ. ಬಳಿಕ ವಿವಾಹ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ. ಆತ ಹೇಳಿದಲ್ಲಿಗೆ ತಾನು ವಧುವಿನಂತೆ ನಟಿಸುವ ಹಳೆಯ ಫೋಟೋವನ್ನು ಆರೋಪಿಗೆ ಕಳುಹಿಸಿದ್ದಾನೆ. ಕೊನೆಗೆ ಫೋಟೋ ನೋಡಿದ ಆರೋಪಿ ಮಹಿಳೆಯನ್ನು ಭೇಟಿಯಾಗಲು ಒಪ್ಪಿಕೊಂಡು ರೋಕಾ ಕಾರ್ಯಕ್ರಮಕ್ಕಾಗಿ ಬಿಜೌರಿ ಗ್ರಾಮದ ದೇಗುಲದ ಬಳಿಯಲ್ಲಿ ಸಿಗಲು ತಿಳಿಸಿದ್ದ. ಈ ವೇಳೆ ಮಹಿಳಾ ಸಬ್ಇನ್ಸ್ಪೆಕ್ಟರ್ ಮಾಧವಿ ಅಗ್ನಿಹೋತ್ರಿ ವಧುವಿನಂತೆ ಇತರೆ ಪೊಲೀಸ್ ಸಿಬ್ಬಂದಿಯೊಂದಿಗೆ ಸಿವಿಲ್ ಡ್ರೆಸ್ನಲ್ಲಿ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.