ವಿಜಯಪುರ, ಡಿ 1 (Daijiworld News/MB) : ಜೀತದಾಳುಗಳಾಗಿ ದುಡಿಯುತ್ತಿದ್ದ ಆರು ಮಹಿಳೆಯರು ಸೇರಿದಂತೆ ಒಟ್ಟು 20 ಮಂದಿಯನ್ನು ವಿಜಯಪುರ ಜಿಲ್ಲಾಡಳಿತ ರಕ್ಷಣೆ ಮಾಡಿದೆ.
ಜೀತದಾಳುಗಳಾಗಿ ದುಡಿಯುತ್ತಿದ್ದವರು ತೆಲಂಗಾಣ ಮೂಲದವರಾಗಿದ್ದು ಏತ ನೀರಾವರಿ ಯೋಜನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. ಜಿಲ್ಲಾಡಳಿತ ಇವರಿಗೆ ಚಡಚಣ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.
20 ಜನರು ಕೂಡಾ ವಿಜಯಪುರದ ಚಡಚಣ ತಾಲೂಕಿನ ಚಡಚಣ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೆಳಗಾವಿಯ ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಜೀತದಾಳುಗಳಾಗಿದ್ದರು.
ಚಡಚಣ ಗ್ರಾಮದಲ್ಲಿ ಜೀತದಾಳು ಇರುವ ಕುರಿತು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ನ್ಯಾಷನಲ್ ಆದಿವಾಸಿ ಸೋಲಿಡರ್ಟಿ ಕೌನ್ಸಿಲ್ ನ ಕೋಆರ್ಡಿನೇಟರ್ ವಾಸುದೇವರಾವ್ ಅವರು ಮಾಹಿತಿ ನೀಡಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಅವರಿಗೆ ಕೂಡಲೇ ಜೀತದಾಳುಗಳನ್ನು ರಕ್ಷಿಸುವಂತೆ ಸೂಚಿಸಿದರು.
ತೆಲಂಗಾಣ ಮೂಲದವರಾದ ಈ ಜೀತದಾಳುಗಳಲ್ಲಿ 13 ಗಂಡಸರು, 6 ಹೆಂಗಸರು ಹಾಗೂ ಓರ್ವ ಬಾಲಕ ಸೇರಿದಂತೆ ೨೦ ಜನರು ಇದ್ದು ಪುನರ್ವಸತಿ ಕಲ್ಪಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಕಳೆದ 2 ತಿಂಗಳುಗಳಿಂದ ಬೆಳಗಾವಿಯ ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ 10 ಸಾವಿರ ಹಾಗೂ 50 ಸಾವಿರ ರೂ.ದಂತೆ ಮುಂಗಡ ಹಣ ನೀಡಿ ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಪ್ರತಿ ತಿಂಗಳು 2 ಸಾವಿರ ರೂ. ಮುಂಗಡ ಹಣದಲ್ಲಿ ಕಡತ ಮಾಡುತ್ತಿದ್ದರು. ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ, ತಮಗೆ ಗುಡಿಸಲುಗಳಲ್ಲಿ ವಾಸಕ್ಕೆ ಇರಿಸಿದ್ದು, ಹೊರಗೆ ಎಲ್ಲೂ ಹೋಗದಂತೆ ನಿರ್ಬಂಧಿಸಿದ್ದರು ಎಂದು ಅವರು ದೂರಿದ್ದಾರೆ.